ರೈಲ್ವೆ ಉದ್ಯೋಗಿಗಳಿಗೆ ಬೋನಸ್ ಘೋಷಣೆ: 78 ದಿನಗಳ ವೇತನ ನೀಡಲು ಸಂಪುಟದ ಅಸ್ತು

ಹೊಸದಿಲ್ಲಿ,ಅ.12: 2021-22ನೇ ಹಣಕಾಸು ವರ್ಷಕ್ಕೆ ಆರ್ಪಿಎಫ್/ಆರ್ಪಿಎಸ್ಎಫ್ (RPF/RPSF) ಸಿಬ್ಬಂದಿಗಳನ್ನು ಹೊರತುಪಡಿಸಿ ಗೆಜೆಟೆಡ್ ಅಲ್ಲದ ರೈಲ್ವೆ(Railway) ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ ಸಂಯೋಜಿತ ಬೋನಸ್ (ಪಿಎಲ್ಬಿ) ನೀಡಲು ಸರಕಾರವು ಬುಧವಾರ ಒಪ್ಪಿಗೆ ನೀಡಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಲಭ್ಯ ದತ್ತಾಂಶಗಳಂತೆ ಸುಮಾರು 11.27 ಲ.ಗೆಜೆಟೆಡ್ ಅಲ್ಲದ ರೈಲ್ವೆ ಉದ್ಯೋಗಿಗಳು ಸರಕಾರದ ನಿರ್ಧಾರದ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಬೋನಸ್ ಪಾವತಿಗೆ(Bonus payment) 1,832.09 ಕೋ.ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ.
ಪಿಎಲ್ಬಿ ಪಾವತಿಗಾಗಿ (Payment of PLB) ವೇತನ ಲೆಕ್ಕಾಚಾರ ಮಿತಿಯನ್ನು ಮಾಸಿಕ 7,000 ರೂ.ಗಳಿಗೆ ನಿಗದಿಗೊಳಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ನೀಡಲಾಗುವ ಗರಿಷ್ಠ ಮೊತ್ತವು 17,951 ರೂ. ಆಗಿರಲಿದೆ.
ಆರ್ಥಿಕತೆಯ ವೇಗವರ್ಧಕವೂ ಆಗಿರುವ ಪ್ರಯಾಣಿಕರು ಮತ್ತು ಸರಕು ಸಾಗಣೆ ಸೇವೆಗಳಲ್ಲಿ (Passenger and freight services)ರೈಲ್ವೆ ಸಿಬ್ಬಂದಿಗಳು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎಂದು ರೈಲ್ವೆ ಸಚಿವಾಲಯವು ಈ ಮೊದಲು ಹೇಳಿತ್ತು. ವಾಸ್ತವದಲ್ಲಿ ಲಾಕ್ಡೌನ್ ಸಂದರ್ಭಗಳಲ್ಲಿಯೂ ಆಹಾರ,ರಸಗೊಬ್ಬರ, ಕಲ್ಲಿದ್ದಲು ಇತ್ಯಾದಿಗಳಂತಹ ಅಗತ್ಯ ಸರಕುಗಳು ಮತ್ತು ಇತರ ಸಾಮಗ್ರಿಗಳ ಅನಿರ್ಬಂಧಿತ ಸಾಗಾಣಿಕೆಯನ್ನು ರೈಲ್ವೆ ಸಿಬ್ಬಂದಿಗಳು ಖಚಿತಪಡಿಸಿದ್ದರು. ಕಾರ್ಯಾಚರಣೆ ಪ್ರದೇಶಗಳಲ್ಲಿ ಇಂತಹ ಸರಕುಗಳ ಕೊರತೆಯಾಗದಂತೆ ರೈಲ್ವೆಯು ಮುತುವರ್ಜಿ ವಹಿಸಿತ್ತು.







