ಕಳೆದ 11 ವರ್ಷಗಳಲ್ಲಿ ದೊಡ್ಡ ಸುಸ್ತಿದಾರರ 1.29 ಲ.ಕೋ.ರೂ. ಕೆಟ್ಟ ಸಾಲಗಳನ್ನು ಮನ್ನಾ ಮಾಡಿರುವ ಕೆನರಾ ಬ್ಯಾಂಕ್
RTI ಅರ್ಜಿಯಿಂದ ಬಹಿರಂಗ

ಹೊಸದಿಲ್ಲಿ,ಅ.12: ಭಾರತದ ನಾಲ್ಕನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಕಳೆದ 11 ವರ್ಷಗಳಲ್ಲಿ 100 ಕೋ.ರೂ. ಮತ್ತು ಹೆಚ್ಚಿನ ಸಾಲಗಳನ್ನು ಪಡೆದಿದ್ದ ದೊಡ್ಡ ಸುಸ್ತಿದಾರರ 1.29 ಲ.ಕೋ.ರೂ.ಗಳ ಕೆಟ್ಟ ಸಾಲಗಳನ್ನು ರೈಟ್ ಆಫ್ (ನಿರ್ದಿಷ್ಟ ಹಣವನ್ನು ತೆಗೆದಿರಿಸಿ ಕೆಟ್ಟ ಸಾಲಗಳನ್ನು ಪ್ರತ್ಯೇಕಿಸುವ ಮೂಲಕ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛಗೊಳಿಸುವುದು, ಸಾಲ ಮನ್ನಾ) ಮಾಡಿದೆ ಎನ್ನುವುದನ್ನು ಆರ್ಟಿಐ ಅರ್ಜಿಗೆ ಲಭಿಸಿರುವ ಉತ್ತರವು ಬಹಿರಂಗಗೊಳಿಸಿದೆ ಎಂದು moneylife ವರದಿ ಮಾಡಿದೆ. ಇದೇ ವೇಳೆ ಆರ್ಟಿಐ ಕಾಯ್ದೆಯ ಕಲಂ 8(1)(ಜೆ) ಅನ್ನು ತಪ್ಪಾಗಿ ಬಳಸಿಕೊಳ್ಳುವ ಮೂಲಕ ದೊಡ್ಡ ಸುಸ್ತಿದಾರರ ಹೆಸರುಗಳನ್ನು ಬಹಿರಂಗಗೊಳಿಸಲು ಬ್ಯಾಂಕ್ ನಿರಾಕರಿಸಿದೆ.
ಆರ್ಟಿಐ ಕಾಯ್ದೆಯ ಈ ನಿಬಂಧನೆಯು ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ನೇರವಾಗಿ ಸಂಬಂಧಿಸಿರದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸುವುದನ್ನು ತಡೆಯುತ್ತದೆ.
‘ಅರ್ಜಿದಾರರು ಕೋರಿರುವ ಮಾಹಿತಿಯು ಸಾಲಗಾರರ ವೈಯಕ್ತಿಕ ಮಾಹಿತಿಯಾಗಿದೆ ಮತ್ತು ಅದನ್ನು ಬಹಿರಂಗಗೊಳಿಸುವುದು ಸಂಬಂಧಿತ ವ್ಯಕ್ತಿಗಳ ಖಾಸಗಿತನದ ಅನಗತ್ಯ ಉಲ್ಲಂಘನೆಯಾಗುತ್ತದೆ ಮತ್ತು ಆರ್ಟಿಐ ಕಾಯ್ದೆಯ ಕಲಂ 8(1)(ಜೆ) ಅಡಿ ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ಪಡೆದಿದೆ’ ಎಂದು ಕೆನರಾ ಬ್ಯಾಂಕ್ ಪುಣೆಯ ಆರ್ಟಿಐ ಕಾರ್ಯಕರ್ತ ವಿವೇಕ್ ವೇಲಂಕರ್ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಉತ್ತರದಲ್ಲಿ ತಿಳಿಸಿರುವಂತೆ ಕೆನರಾ ಬ್ಯಾಂಕ್ 2011-12 ಮತ್ತು 2021-22ನೇ ವಿತ್ತವರ್ಷಗಳ ನಡುವೆ ಒಟ್ಟು 1,29,088 ಕೋ.ರೂ.ಗಳ ಕೆಟ್ಟ ಸಾಲಗಳನ್ನು ರೈಟ್ ಆಫ್ ಮಾಡಿದೆ ಎಂದು ವರದಿ ತಿಳಿಸಿದೆ.
100 ಕೋ.ರೂ.ಗಳಿಗೂ ಹೆಚ್ಚಿನ ಸಾಲಗಳನ್ನು ಹೊಂದಿರುವ ದೊಡ್ಡ ಸುಸ್ತಿದಾರರಿಗೆ ಸಂಬಂಧಿಸಿದ ವಿವರಗಳ ಕುರಿತಂತೆ ಬ್ಯಾಂಕ್, ‘ಕೋರಲಾಗಿರುವ ಮಾಹಿತಿಯನ್ನು ಕೋರಿರುವ ರೀತಿಯಲ್ಲಿ ನಿರ್ವಹಿಸಲಾಗಿಲ್ಲ ’ ಎಂದು ತಿಳಿಸಿದೆ. 2013-14ರಿಂದ 2021-22ರವರೆಗೆ ಪ್ರತಿ ಹಣಕಾಸು ವರ್ಷದಲ್ಲಿ ತಾಂತ್ರಿಕವಾಗಿ ರೈಟ್ ಆಫ್ ಮಾಡಿರುವ 100 ಕೋ.ರೂ.ಗೂ ಹೆಚ್ಚು ಸಾಲಗಾರರ ಸಾಲಗಳ ಒಟ್ಟು ಮೊತ್ತವನ್ನು ವೇಲಂಕರ್ ತನ್ನ ಆರ್ಟಿಐ ಅರ್ಜಿಯಲ್ಲಿ ಕೋರಿದ್ದರು. ಒಂದು ಕೋ.ರೂ. ಮತ್ತು ಕಡಿಮೆ ಸಾಲಗಳನ್ನು ಹೊಂದಿರುವ ಸಾಲಗಾರರಿಂದ ವಸೂಲಿ ಮಾಡಿರುವ ಮೊತ್ತದ ಮಾಹಿತಿಯನ್ನು ನಿರಾಕರಿಸಲು ಕೆನರಾ ಬ್ಯಾಂಕಿನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಆರ್ಟಿಐ ಕಾಯ್ದೆಯ ಇದೇ ನಿಬಂಧನೆಯನ್ನು ನೆಪವಾಗಿಟ್ಟುಕೊಂಡಿದ್ದಾರೆ.
ಆರ್ಟಿಐ ಕಾಯ್ದೆಯಂತೆ ಸಿಪಿಐಒ ಇಂತಹ ನೆಪಗಳನ್ನು ಬಳಸುವಂತಿಲ್ಲ ಮತ್ತು ಕಲಂ 8ರ ಉಪ ಕಲಂ 10,ಕಲಂ 9,ಕಲಂ 11 ಮತ್ತು ಕಲಂ 24ರಡಿ ವ್ಯಾಖ್ಯಾನಿಸಿರುವಂತೆ ನಿರ್ದಿಷ್ಟ ಮಾಹಿತಿಯನ್ನು ಒದಗಿಸಲೇಬೇಕು.
ಕುತೂಹಲದ ವಿಷಯವೆಂದರೆ ಮನ್ನಾ ಮಾಡಲಾಗಿರುವ ಒಂದು ಕೋ.ರೂ. ಅಥವಾ ಕಡಿಮೆ ಮೊತ್ತದ ಕೆಟ್ಟಸಾಲಗಳ ಒಟ್ಟು ಮೊತ್ತವನ್ನು ಹಂಚಿಕೊಳ್ಳುವಂತೆ ವೇಲಂಕರ್ ಅವರ ಕೋರಿಕೆಗೆ ಸಿಪಿಐಒ 2011-12ರಿಂದ 2021-22ರವರೆಗೆ ಇಂತಹ ಸಾಲಗಾರರ ಒಟ್ಟು ಸಾಲಬಾಕಿಯ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಕಳೆದ 11 ವರ್ಷಗಳಲ್ಲಿ ಒಂದು ಕೋ.ರೂ. ಮತ್ತು ಅದಕ್ಕೂ ಕಡಿಮೆ ಸಾಲಗಾರರು ಕೆನರಾ ಬ್ಯಾಂಕಿಗೆ 1,39,812.01 ಕೋ.ರೂ.ಗಳ ಸಾಲಬಾಕಿಯನ್ನಿರಿಸಿದ್ದಾರೆ ಎನ್ನುವುದನ್ನು ಉತ್ತರವು ತೋರಿಸಿದೆ.
ಸಾಮಾನ್ಯ ಸಾಲಗಾರರ ಕುರಿತ ಮಾಹಿತಿಗಳನ್ನು ಬಹಿರಂಗಗೊಳಿಸುವಾಗ ಖಾಸಗಿತನ ನಿಬಂಧನೆಯೇಕೆ ಅನ್ವಯಿಸುವುದಿಲ್ಲ ಎಂದು ಎನ್ಜಿಒ ಸಜಾಗ್ ನಾಗರಿಕ ಮಂಚ್ನ ಅಧ್ಯಕ್ಷರಾಗಿರುವ ವೇಲಂಕರ್ ಪ್ರಶ್ನಿಸಿದರು.
ಸಾರ್ವಜನಿಕರಿಂದ ಮಾಹಿತಿಗಳನ್ನು ಮರೆಮಾಚಲು ಅಧಿಕಾರಿಗಳು ಹೆಚ್ಚಾಗಿ ಆರ್ಟಿಐ ಕಾಯ್ದೆಯ ಈ ನಿಬಂಧನೆಯನ್ನು ನೆಪವನ್ನಾಗಿ ಬಳಸುತ್ತಾರೆ ಎಂದು ಅವರು ಹೇಳಿದರು. ಎರಡು ವರ್ಷಗಳ ಹಿಂದೆಯೂ ಕೆನರಾ ಬ್ಯಾಂಕ್ ಕೆಟ್ಟ ಸಾಲಗಳ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿತ್ತು ಮತ್ತು ಬ್ಯಾಂಕಿನ ವಾರ್ಷಿಕ ವರದಿಗಳನ್ನು ಪರಿಶೀಲಿಸುವಂತೆ ತನಗೆ ಸೂಚಿಸಿತ್ತು ಎಂದು ವೇಲಂಕರ್ ನೆನಪಿಸಿಕೊಂಡರು.
ಕೃಪೆ: Moneylife







