ಬೈಕ್ ಗೆ ಪೊಲೀಸ್ ಬಸ್ ಢಿಕ್ಕಿ, ಮೂವರು ಸವಾರರ ಸಾವು: ಓರ್ವ ಸಜೀವ ದಹನ

ಪಾಟ್ನಾ,ಅ.12: ಪೊಲೀಸ್ ಸಿಬ್ಬಂದಿಗಳನ್ನು(Police personnel) ಸಾಗಿಸುತ್ತಿದ್ದ ಬಸ್ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ಬಿಹಾರದ ಛಾಪ್ರಾ-ಸಿವಾನ್ (Chhapra-Sivan)ಹೆದ್ದಾರಿಯಲ್ಲಿ ಸಂಭವಿಸಿದೆ.
ಇಂಧನ ಟ್ಯಾಂಕ್ ಸ್ಫೋಟಗೊಂಡ (Fuel tank explosion) ಬಳಿಕ ಬಸ್ಸಿ ಗೆ ಬೆಂಕಿ ಹತ್ತಿಕೊಂಡಿದ್ದು ಮೃತ ಸವಾರರ ಪೈಕಿ ಓರ್ವ ಸಜೀವ ದಹನಗೊಳ್ಳುತ್ತಿರುವ ಭೀಕರ ದೃಶ್ಯವನ್ನು ವೀಡಿಯೊಗಳು ತೋರಿಸಿವೆ. ಪೊಲೀಸರು ತಮ್ಮ ಜೀವವುಳಿಸಿಕೊಳ್ಳಲು ಬಸ್ಸಿ ನಿಂದ ಕೆಳಕ್ಕೆ ಜಿಗಿದು ದೂರದಲ್ಲಿ ನಿಂತು ವ್ಯಕ್ತಿಯು ಸಜೀವ ದಹನಗೊಳ್ಳುತ್ತಿರುವುದನ್ನು ನೋಡುತ್ತಿರುವುದೂ ವೀಡಿಯೊದಲ್ಲಿ ದಾಖಲಾಗಿದೆ.
ಡಿಕ್ಕಿಯ ಬಳಿಕ ಬೈಕ್ನೊಂದಿಗೆ ಬಸ್ಸಿನಡಿ ಸಿಲುಕಿದ್ದ ಸವಾರರು ಸುಮಾರು 90 ಅಡಿ ದೂರದವರೆಗೆ ಎಳೆದೊಯ್ಯಲ್ಪಟ್ಟಿದ್ದರು. ಈ ಸಂದರ್ಭದಲ್ಲಿ ಇಂಧನ ಟ್ಯಾಂಕ್ ಸ್ಫೋಟಗೊಂಡು ಓರ್ವ ಸಜೀವ ದಹನಗೊಂಡಿದ್ದಾನೆ.
ಬಸ್ ಹಿರಿಯ ನಾಯಕ ದಿ.ಜಯಪ್ರಕಾಶ ನಾರಾಯಣ ಅವರ 120ನೇ ಜನ್ಮ ದಿನಾಚರಣೆ ಕಾರ್ಯಕ್ರಮದಿಂದ ವಾಪಸಾಗುತ್ತಿತ್ತು. ಕೇಂದ್ರ ಗೃಹಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉರಿಯುತ್ತಿರುವ ಬಸ್,ಸಜೀವ ದಹನಗೊಳ್ಳುತ್ತಿರುವ ವ್ಯಕ್ತಿ ಮತ್ತು ರಸ್ತೆಯಲ್ಲಿ ಇನ್ನೆರಡು ಶವಗಳು ಬಿದ್ದಿರುವುದನ್ನು ಅಪಘಾತದ ವೀಡಿಯೊಗಳು ತೋರಿಸಿವೆ.







