ತುಮಕೂರು | ದಲಿತ ಕುಟುಂಬಕ್ಕೆ ಪೂಜೆ ಮಾಡಲು ಅರ್ಚಕರಿಂದ ನಿರಾಕರಣೆ: ಆರೋಪ
ತುಮಕೂರು, ಅ.12: ದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ದಲಿತ ಕುಟುಂಬವೊಂದಕ್ಕೆ ದೇವಾಲಯದ ಆರ್ಚಕರು ಪೂಜೆ ಮಾಡಲು ನಿರಾಕರಿಸಿದ್ದಾರೆ ಎಂದು ದಲಿತ ಸಮುದಾಯದ ಕೆಲವರು ಆರೋಪಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಡಬ ಗ್ರಾಮದ 20ಕ್ಕೂ ಹೆಚ್ಚು ಜನ ಗುಬ್ಬಿ ತಾಲೂಕಿನ ನಿಟ್ಟೂರು ಸಮೀಪದ ಮುಳ್ಳಕಟ್ಟಮ್ಮ ದೇವಾಲಯದ ಪೂಜೆಗೆಂದು ಆಗಮಿಸಿದ್ದು, ಊಟದ ಸಮಯವಾದ ಕಾರಣ ಊಟ ಮುಗಿಸಿ ಬಂದು ಪೂಜೆ ಮಾಡಿಕೊಡುತ್ತೇನೆ. ಈಗ ದೇವಾಲಯದ ಹೊರೆಗೆ ಹೋಗಿ, ದೇವರ ವಿಗ್ರಹದ ಮೇಲೆ ಒಡವೆ ಇರುವ ಕಾರಣ ದೇವಸ್ಥಾನಕ್ಕೆ ಬೀಗ ಹಾಕಬೇಕು ಎಂದು ಆರ್ಚಕರು ಹೇಳಿದ್ದಾರೆನ್ನಲಾಗಿದೆ.
ಆದರೆ ದೇವಾಲಯದ ಹೊರ ಹೋಗಲು ನಿರಾಕರಿಸಿದ ಜನರು, ಆರ್ಚಕರೊಂದಿಗೆ ಜಗಳ ನಡೆಸಿದ್ದು, ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.ವಿಷಯ ತಿಳಿದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಎರಡು ಕಡೆಯವರಿಂದ ಮಾಹಿತಿ ಪಡೆದು ರಾಜಿ ಸಂಧಾನ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ದೇವಾಲಯದಲ್ಲಿ ಪೂಜೆ ಮಾಡಲು ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಬೋರ್ಡ್ ಹಾಕುವುದಾಗಿ ಮುಜರಾಯಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.