ಹಿಜಾಬ್: ಎರಡು ಭಿನ್ನ ಆದೇಶಗಳ ಬಳಿಕ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ ಪೀಠ
ಹೈಕೋರ್ಟ್ ಆದೇಶ ರದ್ದು ಮಾಡಿದ ನ್ಯಾ. ಸುಧಾಂಶು ಧುಲಿಯಾ, ಹೈಕೋರ್ಟ್ ಆದೇಶ ಎತ್ತಿ ಹಿಡಿದ ನ್ಯಾ. ಹೇಮಂತ್ ಗುಪ್ತಾ
ಹೊಸದಿಲ್ಲಿ: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಗುರುವಾರ ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ಪೀಠ ಎರಡು ಭಿನ್ನ ಆದೇಶ ನೀಡಿದೆ.
ಪೀಠದ ವಿಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗಾಗಿ ಸೂಕ್ತ ವಿಸ್ತೃತ ಪೀಠವನ್ನು ರಚಿಸುವಂತೆ ಕೋರಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಮುಖ್ಯ ನ್ಯಾಯಾಧೀಶರ ಮುಂದೆ ಮಂಡಿಸುವಂತೆ ಪೀಠ ನಿರ್ದೇಶಿಸಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಕರ್ನಾಟಕ ಹೈಕೋರ್ಟ್ ನ ಹಿಜಾಬ್ ನಿಷೇಧದ ತೀರ್ಪನ್ನು ಎತ್ತಿಹಿಡಿದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಎಲ್ಲಾ ಮೇಲ್ಮನವಿಗಳನ್ನು ಅನುಮತಿಸಿದ್ದು ಕರ್ನಾಟಕ ಹೈಕೋರ್ಟ್ ನ ತೀರ್ಪನ್ನು ರದ್ದುಪಡಿಸಿದ್ದಾರೆ.
ಹಿಜಾಬ್ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಅರ್ಜಿಗಳ ಕುರಿತು 10 ದಿನಗಳ ವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ಅವರ ಪೀಠವು ತೀರ್ಪನ್ನು ಸೆ.22ರಂದು ಕಾಯ್ದಿರಿಸಿತ್ತು.
ಮಾರ್ಚ್ 15 ರಂದು ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.