ಬೈಕ್ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ದಂಪತಿ: ಗರ್ಭಿಣಿ ಪತ್ನಿ ಮೃತ್ಯು, ಪತಿ ಗಂಭೀರ
ಮೈಸೂರು: ಬೈಕ್ ನಿಯಂತ್ರಣ ತಪ್ಪಿ ದಂಪತಿ ಕೆರೆಗೆ ಬಿದ್ದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ.
ಯುಮುನಾ (22) ವರ್ಷ ಮೃತ ಮಹಿಳೆ. ಇವರ ಪತಿ ದಕ್ಷಿಣಾ ಮೂರ್ತಿ ಅಲಿಯಾಸ್ ನವೀನ್ (28) ವರ್ಷ ಗಂಭೀರ ಗಾಯಗೊಂಡಿದ್ದಾರೆ.
ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದ ದಕ್ಷಿಣಾ ಮೂರ್ತಿ ತನ್ನ ಹೆಂಡತಿ ಯಮುನಾ ಜೊತೆ ಬೈಕ್ ನಲ್ಲಿ ನಂಜನಗೂಡು ಮಾರ್ಗವಾಗಿ ಸಿದ್ದಯ್ಯನಹುಂಡಿ ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ.
ಬೈಕ್ ನಲ್ಲಿ ದಂಪತಿ ಪ್ರಯಾಣಿಸುತ್ತಿದ್ದಾಗ ಬೈಕ್ ಮುಂದುಗಡೆ ಕೆಲವು ಲಗೇಜ್ ಇಟ್ಟುಕೊಂಡಿದ್ದ ಕಾರಣ ಬೈಕ್ ಹ್ಯಾಂಡಲ್ ತಿರುಗಿಸಲು ಆಗದೆ ಕೂಗಲೂರು ಗ್ರಾಮದ ಕೆರಯೊಂದಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ದಂಪತಿಗಳು ಬಿದ್ದಿದ್ದನ್ನು ಕಂಡ ಸ್ಥಳೀಯರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಶೋದ ನಡೆಸಿ ಗರ್ಭಿಣಿ ಮಹಿಳೆ ಯಮುನಾ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪತಿ ದಕ್ಷಿಣಾ ಮೂರ್ತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ನಂಜನಗೂಡು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶಿವನಂಜ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.