ಪೆಗಾಸಸ್ ನಂತಹ ಝಿರೋ-ಕ್ಲಿಕ್ ಸ್ಪೈವೇರ್ ಗಳು ವರದಿಗಾರರು, ಮೂಲಗಳಿಗೆ ಬೆದರಿಕೆಯಾಗಿವೆ: ಸಿಪಿಜೆ ವರದಿ

ಹೊಸದಿಲ್ಲಿ,ಅ.13: ಝಿರೋ-ಕ್ಲಿಕ್ (Zero-click) ಕಾರ್ಯಾಚರಣೆಗಳ ಮೂಲಕ ವಿದ್ಯುನ್ಮಾನ ಸಾಧನಗಳಿಗೆ ಕನ್ನ ಹಾಕುವ ಪೆಗಾಸಸ್ನಂತಹ(Like Pegasus) ಹೊಸ ಪೀಳಿಗೆಯ ಸ್ಪೈವೇರ್ಗಳು ಅಥವಾ ಬೇಹುಗಾರಿಕೆ ಸಾಫ್ಟ್‌ವೇರ್(Software) ಗಳು ವರದಿಗಾರರು ಮತ್ತು ಜಾಗತಿಕ ಪತ್ರಿಕಾ ಸ್ವಾತಂತ್ರಕ್ಕೆ ಇತ್ತೀಚಿನ ಬೆದರಿಕೆಗಳಾಗಿವೆ ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್(ಸಿಪಿಜೆ)(To Protect Journalists) ಗುರುವಾರ ಪ್ರಕಟಿಸಿರುವ ತನ್ನ ವರದಿಯಲ್ಲಿ ಹೇಳಿದೆ.
ಝಿರೋ-ಕ್ಲಿಕ್ ಕಾರ್ಯಾಚರಣೆಯು ಫೋನ್ ಮಾಲಿಕನ ಯಾವುದೇ ಹಸ್ತಕ್ಷೇಪವಿಲ್ಲದೆ ಸ್ವಯಂ ಯಶಸ್ವಿಯಾಗುತ್ತದೆ. ಇಂತಹ ಕಾರ್ಯಾಚರಣೆಗಳು ಮೊಬೈಲ್ ಫೋನ್ ತಯಾರಕನಿಗೆ ಇನ್ನೂ ಗೊತ್ತಿರದ ಮತ್ತು ಆದ್ದರಿಂದ ಸರಿಪಡಿಸಲು ಸಾಧ್ಯವಾಗಿರದ ಆಪರೇಟಿಂಗ್ ಸಿಸ್ಟಮ್ನಲ್ಲಿಯ ‘ಝೀರೋ-ಡೇ’ ('Zero-Day')ದೋಷಗಳನ್ನು ಬಳಸಿಕೊಳ್ಳುತ್ತವೆ.
ಸಂದೇಶಗಳು,ಫೋಟೊಗಳು ಮತ್ತು ಇ-ಮೇಲ್(e-mail)ಗಳನ್ನು ಕದಿಯಲು, ಕರೆಗಳನ್ನು ಮುದ್ರಿಸಿಕೊಳ್ಳಲು ಹಾಗೂ ಮೈಕ್ರೋಫೋನ್ ಗಳು ಮತ್ತು ಕ್ಯಾಮೆರಾಗಳನ್ನು ರಹಸ್ಯವಾಗಿ ಸಕ್ರಿಯಗೊಳಿಸಲು ಆಪರೇಟರ್ಗಳಿಗೆ ಅವಕಾಶ ಕಲ್ಪಿಸುವ ಪೆಗಾಸಸ್ ಸೋಂಕುಗಳನ್ನು ಝಿರೋ-ಕ್ಲಿಕ್ ದಾಳಿಗಳ ಮೂಲಕವೂ ಸಾಧಿಸಬಹುದು.
ಇಂತಹ ಸ್ಪೈವೇರ್ಗಳ ದಾಳಿಗೆ ಗುರಿಯಾಗಿರುವ ಫೋನ್ ಗಳ ಮಾಲಿಕರು ಯಾವುದೇ ಲಿಂಕ್ ಅನ್ನು ತೆರೆಯದಿದ್ದರೂ ಅಥವಾ ಅಟ್ಯಾಚ್ಮೆಂಟ್(Attachment) ಅನ್ನು ಡೌನ್ಲೋಡ್ (Download)ಮಾಡಿಕೊಳ್ಳದಿದ್ದರೂ ಅವು ಕಾರ್ಯಾಚರಿಸುತ್ತವೆ. ಅವು ಫೊನ್ನ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಉತ್ತರಿಸದ ಕರೆ ಅಥವಾ ಅಗೋಚರ ಟೆಕ್ಸ್ಟ್ ಸಂದೇಶವಷ್ಟೇ ಸಾಕಾಗುತ್ತದೆ ಎಂದು ಪತ್ರಕರ್ತ ಫ್ರೆಡ್ ಗುಟೆರ್ಲ್ ಅವರು ಬರೆದಿರುವ ವರದಿಯು ಹೇಳಿದೆ.
ಕಣ್ಗಾವಲಿನ ಭೀತಿಯು ವರದಿಗಾರರು ಮಾತ್ರವಲ್ಲ,ಅವರ ಮೂಲಗಳ ಮೇಲೂ ಪರಿಣಾಮ ಬೀರುತ್ತದೆ. ವರದಿಗಾರರೊಂದಿಗೆ ತಮ್ಮ ಸಂವಹನದಿಂದ ತಾವು ಅಧಿಕಾರಿಗಳಿಂದ ಪ್ರತೀಕಾರಕ್ಕೆ ಗುರಿಯಾಗಬಹುದು ಎಂದು ಈ ಮೂಲಗಳು ಭಯಗೊಳ್ಳುತ್ತವೆ ಎಂದು ವರದಿಯು ಹೇಳಿದೆ.
ತಮ್ಮ ವೈಯಕ್ತಿಕ ಸುರಕ್ಷತೆ ಮಾತ್ರವಲ್ಲ,ತಮ್ಮಿಂದಿಗೆ ಗುರಿಯಾಗಬಹುದಾದ ಸ್ನೇಹಿತರು ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆಯೂ ತಾವು ಕಳವಳಗೊಂಡಿದ್ದೇವೆ ಎಂದು ಹಲವಾರು ಪತ್ರಕರ್ತರು ಸಿಪಿಜೆಗೆ ತಿಳಿಸಿದ್ದಾರೆ.
ಯಾವುದೇ ಪತ್ರಕರ್ತರನ್ನು ಅವರಿಗೆ ಗೊತ್ತಾಗದೆ ಟ್ಯಾಪ್ (Tap)ಮಾಡಬಹುದು ಎಂಬ ಅರಿವು ಅಸಹಾಯಕತೆಯ ಭಾವನೆಗಳನ್ನು ಸೃಷ್ಟಿಸಿದೆ ಮತ್ತು ಇದು ವೃತ್ತಿಯನ್ನು ತೊರೆಯಲು ಅನೇಕರನ್ನು ಪ್ರೇರೇಪಿಸಬಹುದು ಅಥವಾ ವೃತ್ತಿಯನ್ನು ಪ್ರವೇಶಿಸುವ ಆಸಕ್ತಿಯನ್ನೇ ತೊಡೆದುಹಾಕಬಹುದು ಎಂದು ಸಿಪಿಜೆ ಹೇಳಿದೆ.
‘ಪತ್ರಕರ್ತರ ವಿರುದ್ಧ ದೈಹಿಕ ಹಿಂಸೆಗಳ ಜೊತೆಗೆ ಡಿಜಿಟಲ್ ಬೆದರಿಕೆಗಳೂ ಹೆಚ್ಚುತ್ತಿವೆ. ಪೆಗಾಸಸ್ನಂತಹ ಸಾಧನಗಳಿಂದ ಹಾನಿಯು ಹಿಂಸಾಚಾರದ ಹೆಚ್ಚಳಕ್ಕೆ ಕೊಡುಗೆಯನ್ನು ನೀಡುತ್ತಿದೆ ’ ಎಂದು ಟೊರೊಂಟೊ ವಿವಿಯ ಸಿಟಿಝನ್ ಲ್ಯಾಬ್ನಲ್ಲಿ ಹಿರಿಯ ಸಂಶೋಧಕರಾಗಿರುವ ಜಾನ್ ಸ್ಕಾಟ್ ರೇಲ್ಟನ್ ಅವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.







