ಅ.15ಕ್ಕೆ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ದ.ಕ., ಉಡುಪಿ ಎಐಸಿಎಸ್ ಸಾಂಸ್ಕೃತಿಕ ಸ್ಪರ್ಧೆ
ಉಡುಪಿ, ಅ.13: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆ ಐಸಿಎಸ್‌ಇ ಪಠ್ಯಕ್ರಮ ಅಳವಡಿಸಿ ಕೊಂಡಿರುವ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳ ಒಕ್ಕೂಟದ ಪ್ರಸ್ತುತ ವರುಷದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅ.15ರಂದು ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಒಟ್ಟು 28 ಐಸಿಎಸ್‌ಇ ಮತ್ತು ಸಿಬಿಎಸ್‌ಇ ಶಾಲೆಗಳು ಭಾಗವಹಿಸಲಿವೆ. ಜೂನಿಯರ್ ವಿಭಾಗದಲ್ಲಿ 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, ಅಗ್ನಿರಹಿತ ಅಡುಗೆ, ಛದ್ಮವೇಷ, ಪುಷ್ಪಾಲಂಕಾರ ಮತ್ತು ಆವೆಮಣ್ಣಿನ ಪ್ರತಿಕೃತಿ ರಚನಾ ಸ್ಪರ್ಧೆಗಳನ್ನು ಹಾಗೂ ಸೀನಿಯರ್ ವಿಭಾಗದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ಸಮೂಹ ನೃತ್ಯ, ರಂಗೋಲಿ, ವರ್ಣಚಿತ್ರ, ಹಣ್ಣು ಮತ್ತು ತರಕಾರಿಗಳಲ್ಲಿ ಕಲಾಕೃತಿ ರಚನೆ ಮತ್ತು ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 9:30ಕ್ಕೆ ಸ್ಪರ್ಧೆಗಳನ್ನು ಎಐಸಿಎಸ್‌ನ ಉಡುಪಿ ಮತ್ತು ದ.ಕ. ಜಿಲ್ಲೆಯ ಕಾರ್ಯದರ್ಶಿ ಹಾಗೂ ಮಣಿಪಾಲ ಕ್ರೈಸ್ಟ್ ಸ್ಕೂಲ್‌ನ ಪ್ರಾಂಶುಪಾಲೆ ಎಲಿಜಾ ಉದ್ಘಾಟಿಸಲಿದ್ದಾರೆ. ಅಪರಾಹ್ನ 3:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ಉಡುಪಿ ಪಾಜಕದ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಗೀತಾ ಶಶಿಧರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.