ದಾಳಿಗೊಳಗಾದ ತನಿಖಾ ಪತ್ರಕರ್ತನ ಸುರಕ್ಷತೆಯನ್ನು ಖಚಿತಪಡಿಸಿ: ಅಟಾರ್ನಿ ಜನರಲ್ ಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ,ಅ.13: ತಾನು ಬೆನ್ನು ಬಿದ್ದಿರುವ ಕಾರ್ಪೊರೇಟ್ (Corporate) ವಂಚನೆಗೆ ಸಂಬಂಧಿಸಿದಂತೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಮತ್ತು ತನ್ನ ಮೇಲೆ ದಾಳಿಯನ್ನು ನಡೆಸಲಾಗಿದೆ ಎಂದು ದೂರಿಕೊಂಡಿರುವ ತನಿಖಾ ಪತ್ರಕರ್ತನ ಸುರಕ್ಷತೆಯನ್ನು ಖಚಿತಪಡಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು (Supreme Court) ಅಟಾರ್ನಿ ಜನರಲ್ ಆರ್.ವೆಂಕಟರಮಣಿ (R. Venkataramani) ಅವರಿಗೆ ಸೂಚಿಸಿದೆ.
27 ಬ್ಯಾಂಕುಗಳಿಂದ ಸಾಲಗಳನ್ನು ಪಡೆದುಕೊಂಡು ಅದನ್ನು ಅನ್ಯ ಉದ್ದೇಶಗಳಿಗಾಗಿ ಬಳಸಿರುವ ಕಂಪನಿಯೊಂದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (U.U.Lalit)ನೇತೃತ್ವದ ಪೀಠವು ಸೂಚನೆಯನ್ನು ನೀಡಿದೆ.
ಬಂದ್ ಮಾಡಿದ ಲಕೋಟೆಯಲ್ಲಿ ಪತ್ರಕರ್ತನ ಕುರಿತು ಅಫಿಡವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿದಾರರ ಪರ ವಕೀಲರು, ವಂಚನೆಯ ಕುರಿತು ತನ್ನ ಕಕ್ಷಿದಾರರು ತನಿಖೆಯನ್ನು ನಡೆಸಿದ್ದು ಈಗ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ,ಇತ್ತೀಚಿಗೆ ಅವರು ನೊಯ್ಡಾದಲ್ಲಿಯ ತನ್ನ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ದಾಳಿಯೂ ನಡೆದಿದೆ ಎಂದು ತಿಳಿಸಿದರು.
ಪತ್ರಕರ್ತ ಮತ್ತು ಆತನ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವೆಂಕಟರಮಣಿ ಪೀಠಕ್ಕೆ ತಿಳಿಸಿದರು.







