ಐಬಿ ಉದ್ಯೋಗಿ ಕೊಲೆ ಆರೋಪಿ ತೆಲಂಗಾಣದಲ್ಲಿ ಬಂಧನ
ದಿಲ್ಲಿ ಗಲಭೆ ಪ್ರಕರಣ

ಹೊಸದಿಲ್ಲಿ,ಅ.13: ಈಶಾನ್ಯ ದಿಲ್ಲಿ(Delhi)ಯಲ್ಲಿ 2020ರಲ್ಲಿ ಸಂಭವಿಸಿದ್ದ ಗಲಭೆಗಳ ಸಂದರ್ಭ ಗುಪ್ತಚರ ಘಟಕ (ಐಬಿ)ದ ಉದ್ಯೋಗಿ ಅಂಕಿತ ಶರ್ಮಾ ಕೊಲೆ (Sharma's murder)ಪ್ರಕರಣದ ಪ್ರಮುಖ ಶಂಕಿತ ಮುಂತಾಜಿಮ್ ಎಂಬಾತನನ್ನು ತೆಲಂಗಾಣದ ಮೀರ್‌ಪೇಟ್‌ನಲ್ಲಿ ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ ಪೊಲೀಸರ ವಿಶೇಷ ಘಟಕವು ಶರ್ಮಾ ಕೊಲೆ ಸಂಚನ್ನು ರೂಪಿಸಿದ್ದ ಆರೋಪದಲ್ಲಿ ಮುಂತಾಜಿಮ್‌ನನ್ನು ಸೋಮವಾರ ಬಂಧಿಸಿದೆ.
ಶರ್ಮಾರ ತಂದೆ ತಿಳಿಸಿರುವಂತೆ ಅವರ ಪುತ್ರನನ್ನು ಚಾಂದಬಾಗ್(Chandbaugh)ನಲ್ಲಿ 2020,ಫೆ.20ರಂದು ಸಂಜೆ ಚೂರಿಯಿಂದ ಇರಿಯಲಾಗಿದ್ದು, ಪ್ರದೇಶದಲ್ಲಿಯ ಚರಂಡಿಯೊಂದರಲ್ಲಿ ಅವರ ಶವವು ಪತ್ತೆಯಾಗಿತ್ತು.
ದಿಲ್ಲಿ ಗಲಭೆಗಳಲ್ಲಿ ಶರ್ಮಾ ಸೇರಿದಂತೆ 53 ಜನರು ಕೊಲ್ಲಲ್ಪಟ್ಟಿದ್ದರು. ಶರ್ಮಾ ಕೊಲೆ ಪ್ರಕರಣದಲ್ಲಿ ಮಾಜಿ ಆಪ್ ಶಾಸಕ ತಾಹಿರ್ ಹುಸೇನ್ ಮತ್ತು ಇತರ ಒಂಭತ್ತು ಜನರು ಆರೋಪಿಗಳಾಗಿದ್ದಾರೆ.
ತಾನು ನಿರಪರಾಧಿ ಎಂದು ಹುಸೇನ್ (Hussain) ಹೇಳಿದ್ದಾರೆ.
ಮುಂತಾಜಿಮ್‌ನ ಫೋನ್ ಕರೆಗಳ ದಾಖಲೆಗಳು ಪೊಲೀಸರ ಬಳಿಯಿದ್ದು,ಸ್ಥಳದಲ್ಲಿ ಸೇರುವಂತೆ ಮತ್ತು ಶರ್ಮಾ ಮೇಲೆ ದಾಳಿ ನಡೆಸುವಂತೆ ಆತ ಜನರಿಗೆ ಕರೆ ನೀಡಿದ್ದನ್ನು ಆಲಿಸಬಹುದು ಎಂದು ಪೊಲೀಸ್ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಆರು ತಿಂಗಳುಗಳಿಂದ ಮುಂತಾಜಿಮ್ ತೆಲಂಗಾಣದಲ್ಲಿರುವ ಮಾಹಿತಿಯನ್ನು ಪಡೆದಿದ್ದ ಪೊಲೀಸರು ಸರಣಿ ದಾಳಿಗಳ ಬಳಿಕ ಆತ ಅಲ್ಲಿಯ ಔಷಧಿ ಅಂಗಡಿಯೊಂದಕ್ಕೆ ಆಗಾಗ್ಗೆ ಭೇಟಿ ನೀಡುತ್ತಾನೆ ಎನ್ನುವುದನ್ನು ಪತ್ತೆ ಹಚ್ಚಿದ್ದರು. ಆತನಿಗಾಗಿ ಬಲೆ ಬೀಸಿದ್ದ ಪೊಲೀಸರು ಅಂಗಡಿಗೆ ಬಂದಾಗ ಬಂಧಿಸಿದ್ದಾರೆ ಎನ್ನಲಾಗಿದೆ.







