ಉಡುಪಿ: ಕೃಷಿಗೆ ಸಂಬಂಧಿಸಿ ರಫ್ತುದಾರರ ಸಮಾವೇಶ

ಉಡುಪಿ, ಅ.13: ಲಘು ಉದ್ಯೋಗ ಭಾರತಿ ಕರ್ನಾಟಕ, ಐಎಂಎಸ್ ಫೌಂಡೇಷನ್ ಹಾಗೂ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉಡುಪಿಯಲ್ಲಿ ಕರಾವಳಿ ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ರಫ್ತುದಾರರ ಸಮಾವೇಶ ಹಾಗೂ ಪ್ರದರ್ಶನವನ್ನು ಶುಕ್ರವಾರ ಆಯೋಜಿಸಲಾಗಿದೆ.
ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ನಡೆಯುವ ಈ ಸಮಾವೇಶ ಹಾಗೂ ಪ್ರದರ್ಶನವನ್ನು ಬೆಳಗ್ಗೆ 10 ಗಂಟೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅಧಿವೇಶವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಸರಕಾರಿ ಇಲಾಖೆಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಮುದಾಯ, ರಫ್ತುದಾರರು ಹಾಗೂ ಇತರರು ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಕರಾವಳಿ ಕರ್ನಾಟಕ ಭಾಗದಲ್ಲಿ ರಫ್ತು ವ್ಯವಹಾರವನ್ನು ಅನ್ವೇಷಿಸುವ ಉದ್ದೇಶ ಹೊಂದ ಲಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.
ಸಮಾವೇಶದಲ್ಲಿ ವ್ಯಾಪಾರ ಮಾದರಿಗಳು, ಮೌಲ್ಯವರ್ಧನೆ ಮತ್ತು ತಂತ್ರಜ್ಞಾನದ ಮಧ್ಯಸ್ಥಿಕೆ, ಸರಕಾರಗಳ ಬೆಂಬಲ ವ್ಯವಸ್ಥೆ ಹಾಗೂ ಯಶಸ್ಸಿನ ಕತೆಗಳ ಹಂಚಿಕೆ ವಿಷಯಗಳ ಮೇಲೆ ದಿನವಿಡೀ ಚರ್ಚೆ, ಸಂವಾದ ನಡೆಯಲಿದೆ.
ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಇಲಾಖೆಯ ಎಪಿಇಡಿಎ ಅಧ್ಯಕ್ಷ ಡಾ.ಎಂ.ಅಂಗಮುತ್ತು, ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆಯ ಕಮಿಷನರ್ ಡಾ.ಎಂ.ವಿ.ವೆಂಕಟೇಶ್, ತೋಟಗಾರಿಕಾ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್, ರಾಜ್ಯ ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನದ ವಿಶೇಷ ಕಾರ್ಯದರ್ಶಿ ಡಾ.ಮನೋಜ್ ರಾಜನ್, ನಬಾರ್ಡ್‌ನ ಮುಖ್ಯ ಜನರಲ್ ಮ್ಯಾನೇಜರ್ ಟಿ.ರಮೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದು, ೨೫ಕ್ಕೂ ಅಧಿಕ ಮಳಿಗೆಗಳು ವೈವಿದ್ಯ ಮಯ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಇದರೊಂದಿಗೆ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ.







