ನೇಟೊಗೆ ಉಕ್ರೇನ್‍ನ ಪ್ರವೇಶ ವಿಶ್ವಯುದ್ಧಕ್ಕೆ ಕಾರಣವಾಗಬಹುದು: ರಶ್ಯ ಎಚ್ಚರಿಕೆ

ಮಾಸ್ಕೊ, ಅ.13: ಈ ಹಿಂದಿನ ಸೋವಿಯತ್ ಒಕ್ಕೂಟದ ದೇಶವಾಗಿರುವ ಉಕ್ರೇನ್ ನೇಟೊ(Ukraine NATO) ಪ್ರವೇಶಿಸುವುದು 3ನೇ ವಿಶ್ವಯುದ್ಧಕ್ಕೆ ಕಾರಣವಾಗಬಹುದು ಎಂದು ರಶ್ಯದ ಭದ್ರತಾ ಸಮಿತಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿಕ್ಟೋವ್(Alexander Venediktov) ಎಚ್ಚರಿಸಿದ್ದಾರೆ.
`ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್(North Atlantic Treaty Organization)(ನೇಟೊ)ಗೆ ತ್ವರಿತ ಸೇರ್ಪಡೆ ಬಯಸಿ ಉಕ್ರೇನ್ ಅರ್ಜಿ ಸಲ್ಲಿಸಿರುವುದು ಪ್ರಚಾರದ ಕ್ರಮವಾಗಿದೆ. ಯಾಕೆಂದರೆ ಇಂತಹ ನಡೆಯು ಖಂಡಿತಾ 3ನೇ ವಿಶ್ವಯುದ್ಧಕ್ಕೆ ಕಾರಣವಾಗಲಿದೆ ಎಂಬುದನ್ನು ಉಕ್ರೇನ್ ಸ್ಪಷ್ಟವಾಗಿ ತಿಳಿದಿದೆ ಎಂದು ಸರಕಾರಿ ಸ್ವಾಮ್ಯದ ತಾಸ್ ಸುದ್ಧಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಅವರ ಉದ್ದೇಶ ಸ್ಪಷ್ಟವಾಗಿದೆ. ಉದ್ದೇಶಪೂರ್ವಕವಾಗಿ ವದಂತಿ ಹಬ್ಬಿಸಿ ವಿಶ್ವದ ಗಮನವನ್ನು ಮತ್ತೆ ಮತ್ತೆ ತಮ್ಮತ್ತ ಸೆಳೆಯುವುದಕ್ಕೆ ಅವರು ಮುಂದಾಗಿದ್ದಾರೆ. ಉಕ್ರೇನ್‍ನ ಅರ್ಜಿಯನ್ನು ಸ್ವೀಕರಿಸಿದರೆ ಆತ್ಮಹತ್ಯೆ ಮಾಡಿಕೊಂಡತಾಗುತ್ತದೆ ಎಂಬುದನ್ನು ನೇಟೊ ಸದಸ್ಯರೂ ಅರ್ಥಮಾಡಿಕೊಂಡಿದ್ದಾರೆ. ಅದೇನೇ ಇದ್ದರೂ, ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ನೇಟೊ ಅಥವಾ ಅಮೆರಿಕದ ಆಶ್ರಯದಡಿ ರಚನೆಯಾಗುವ ಯಾವುದೇ ಒಕ್ಕೂಟಕ್ಕೆ ಉಕ್ರೇನ್‍ನ ಸೇರ್ಪಡೆ ನಮಗೆ ಖಂಡಿತಾ ಸ್ವೀಕಾರಾರ್ಹವಲ್ಲ . ಉಕ್ರೇನ್‍ಗೆ ನೆರವಾಗುವ ಮೂಲಕ ಈ ಸಂಘರ್ಷದಲ್ಲಿ ತಾವೂ ನೇರವಾಗಿ ಶಾಮೀಲಾಗಿರುವುದನ್ನು ಪಾಶ್ಚಿಮಾತ್ಯರು ಜಾಹೀರುಪಡಿಸಿದ್ದಾರೆ ಎಂದು ವೆನೆಡಿಕ್ಟೋವ್ ಹೇಳಿದ್ದಾರೆ.
ಉಕ್ರೇನ್‍ನಿಂದ ವಶಕ್ಕೆ ಪಡೆದಿರುವ 4 ವಲಯಗಳನ್ನು ರಶ್ಯದ ಪ್ರಾಂತವೆಂದು ಘೋಷಿಸುವ ಕಾರ್ಯಕ್ರಮವನ್ನು ರಶ್ಯ ಅಧ್ಯಕ್ಷ ಪುಟಿನ್ (Russian President Putin)ಆಯೋಜಿಸುತ್ತಿದ್ದಂತೆಯೇ, ನೇಟೊ ಸದಸ್ಯತ್ವ ಕೋರಿದ ತಮ್ಮ ಅರ್ಜಿಯ ಬಗ್ಗೆ ತ್ವರಿತಕ್ರಮಕ್ಕೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಒತ್ತಾಯಿಸಿದ್ದರು.
ಈ ಮಧ್ಯೆ, ಉಕ್ರೇನ್‍ನ 4 ಪ್ರಾಂತಗಳನ್ನು ಸ್ವಾಧೀನಕ್ಕೆ ಪಡೆಯುವ ರಶ್ಯದ ಕ್ರಮವನ್ನು ಖಂಡಿಸುವ ನಿರ್ಣಯದ ಪರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 193 ಸದಸ್ಯದೇಶಗಳಲ್ಲಿ 143 ದೇಶಗಳು ಬುಧವಾರ ಮತ ಚಲಾಯಿಸಿವೆ.