ನಾವು ವಿಶ್ವಯುದ್ಧ ಬಯಸುತ್ತಿಲ್ಲ: ಫ್ರಾನ್ಸ್

ಪ್ಯಾರಿಸ್, ಅ.13: ಉಕ್ರೇನ್ ನೇಟೊಗೆ ಸೇರ್ಪಡೆಯಾಗುವುದು 3ನೇ ವಿಶ್ವಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ರಶ್ಯದ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್(Emmanuel Macron), ನಾವು ವಿಶ್ವಯುದ್ಧವನ್ನು ಬಯಸುತ್ತಿಲ್ಲ . ಆದರೆ ರಶ್ಯ ಅಧ್ಯಕ್ಷ ಪುಟಿನ್ (Putin) ಉಕ್ರೇನ್‍ನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ ಈ ಯುದ್ಧವನ್ನು ಅಂತ್ಯಗೊಳಿಸಬೇಕು ಎಂದಿದ್ದಾರೆ.
ತನ್ನ ಮೇಲಿನ ಆಕ್ರಮಣವನ್ನು ಎದುರಿಸಲು ಉಕ್ರೇನ್‍ಗೆ ನಾವು ನೆರವಾಗುತ್ತಿದ್ದೇವೆ. ರಶ್ಯದ ಮೇಲೆ ಆಕ್ರಮಣ ನಡೆಸಲು ಅಲ್ಲ, ಇದನ್ನು ಪುಟಿನ್ ಅರ್ಥ ಮಾಡಿಕೊಳ್ಳಬೇಕು ಎಂದು ಮಾಧ್ಯಮದ ಜತೆ ಮಾತನಾಡಿದ ಮಾಕ್ರನ್ ಹೇಳಿದ್ದಾರೆ.
ಒಂದು ವೇಳೆ ಉಕ್ರೇನ್‍ನಲ್ಲಿ ರಶ್ಯ ಪರಮಾಣು ದಾಳಿ ನಡೆಸಿದರೂ ಪ್ರತಿಯಾಗಿ ಪರಮಾಣು ದಾಳಿಯನ್ನು ತಾನು ಅನುಮತಿಸುವುದಿಲ್ಲ. ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಪರಮಾಣು ದಾಳಿಯಾದರೂ ನಮ್ಮ ಸಿದ್ಧಾಂತದಲ್ಲಿ ಬದಲಾವಣೆ ಆಗುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಉಕ್ರೇನ್‍ಗೆ ನೆರವು ಒದಗಿಸುವ ಪ್ರಮುಖ ದೇಶಗಳಲ್ಲಿ ಫ್ರಾನ್ಸ್ ಕೂಡಾ ಸೇರಿದೆ.





