ಹಿಂದುಳಿದ ಜಾತಿಗಳ ಮೀಸಲಾತಿಯಲ್ಲಿ ಸರಕಾರದಿಂದ ದ್ವಂದ್ವ ನೀತಿ: ಅಹಿಂದ

ಮಂಗಳೂರು, ಅ.13: ರಾಜ್ಯದಲ್ಲಿ ಮುಸ್ಲಿಮರು ಹಾಗೂ ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣ ರಂಗದಲ್ಲಿ ಈಗ ಇರುವ ಶೇಕಡಾವಾರು ಮೀಸಲಾತಿ ಜೊತೆಗೆ ಹೆಚ್ಚುವರಿಯಾಗಿ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕಲ್ಪಿಸಿ ಪ್ರಾತಿನಿಧ್ಯ ನೀತಿಯನ್ನು ಜಾರಿಗೊಳಿಸಬೇಕು ಎಂದು ಅಲ್ಪಸಂಖ್ಯಾತರು, ಹಿಂದುಳಿಸಲ್ಪಟ್ಟ ಜಾತಿಗಳು ಹಾಗೂ ದಲಿತರ ಜನ ಚಳವಳಿ (ಅಹಿಂದ)ಯ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹಿಂದ ದ.ಕ. ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು, ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರತ್ಯೇಕವಾಗಿರುವ ಶೇ.4 ಮೀಸಲಾತಿಯನ್ನು ರದ್ದುಗೊಳಿಸಿ ಅವರನ್ನು 101 ಹಿಂದುಳಿದ ಜಾತಿಗಳ ‘2ಎ’ ಗುಂಪಿಗೆ ಸೇರಿಸಲು ರಾಜ್ಯ ಸರ್ಕಾರದ ನೂತನ ಮೀಸಲಾತಿ ನೀತಿಯಲ್ಲಿ ಉದ್ದೇಶಿಸಲಾಗಿದೆ. ಇದು ಸರಕಾರದ ದ್ವಂದ್ವ ನೀತಿ ಎಂದರು.
ರಾಜ್ಯದಲ್ಲಿ ಶೇ. 14ರಷ್ಟಿರುವ ಮುಸ್ಲಿಮರಿಗೆ ಉದ್ಯೋಗ ಮತ್ತು ಮೀಸಲಾತಿಯ ಶೇ. 4 ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಶೇ. 15 ಮೀಸಲಾತಿ ಇರುವ 101 ಹಿಂದುಳಿದ ಜಾತಿಗಳ 2ಎ ಗುಂಪಿಗೆ ಸೇರಿಸಿ ಆ ಮೂಲಕ ಶೇ. 19 ಮೀಸಲಾತಿ ಕಲ್ಪಿಸುವುದಲ್ಲದೆ ಪಂಚಮಶಾಲಿ ಜಾತಿಯನ್ನು ಕೂಡಾ ಸೇರಿಸಲು ನಿರ್ಧರಿಸಲಾಗಿದೆ. ಇದರಿಂದ 101 ಹಿಂದುಳಿದ ಜಾತಿಗಳಿಗೆ ಮೀಸಲಾತಿಯಲ್ಲಿ ನಷ್ಟವಾಗಲಿದೆ. ಸದ್ರಿ ಹಿಂದುಳಿದ ಜಾತಿಗಳು, ಪಂಚಮಶಾಲಿ ಮತ್ತು ಮುಸ್ಲಿಮರ ಮಧ್ಯೆ ಮೀಸಲಾತಿಗಾಗಿ ಪೈಪೋಟಿ ಮತ್ತು ಅಸಹಿಷ್ಣುತೆ ಜಾಸ್ತಿಯಾಗಲಿದೆ ಎಂದು ಅವರು ಆಕ್ಷೇಪಿಸಿದರು.
ಪಂಚಮಶಾಲಿಗಳನ್ನು 2ಎ ಗುಂಪಿಗೆ ಸೇರಿಸದೆ ಅವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಚುನಾವಣಾ ಮೀಸಲಾತಿಯಲ್ಲೂ ಸಮಸ್ಯೆ
ಸಂಘಟನೆ ಉಪಾಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಮಾತನಾಡಿ, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 101 ಹಿಂದುಳಿದ ಜಾತಿಗಳೊಂದಿಗೆ ಮುಸ್ಲಿಮರನ್ನು ‘ಎ’ ಮೀಸಲಾತಿಯಲ್ಲಿ ಈಗಾಗಲೇ ಒಳಗೊಳಿಸಲಾಗಿದೆ. ಇದರಿಂದ ಚುನಾವಣೆಯ ಸ್ಥಾನಕ್ಕಾಗಿ ಹಿಂದುಳಿದ ವರ್ಗ ಮತ್ತು ಮುಸ್ಲಿಮರ ನಡುವೆ ಅಪನಂಬಿಕೆ ಜಾಸ್ತಿಯಾಗಿ ಕೋಮು ವೈಷಮ್ಯಕ್ಕೂ ಕಾರಣವಾಗಿದೆ. ಕೂಡಲೆ ‘ಎ’ ಗುಂಪಿನಿಂದ ಮುಸ್ಲಿಮರನ್ನು ಪ್ರತ್ಯೇಕಿಸಬೇಕು. ಹಿಂದುಳಿದ ಜಾತಿಗಳು, ಪಂಚಮಸಾಲಿಗಳು, ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯದ ಮೀಸಲಾತಿ ಜಾರಿಗೆ ತರಬೇಕು. ಆಗ ಮಾತ್ರ ಎಲ್ಲ ವರ್ಗಗಳಿಗೂ ಸೂಕ್ತ ನ್ಯಾಯ ದೊರಕಿದಂತಾಗುತ್ತದೆ ಎಂದು ಒತ್ತಾಯಿಸಿದರು.
ಸಂಘಟನೆಯ ಉಪಾಧ್ಯಕ್ಷ ಪದ್ಮನಾಭ ನರಿಂಗಾನ, ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಉಳ್ಳಾಲ, ಸಂಚಾಲಕ ಭರತೇಶ್ ಅಮೀನ್ ಬಜಾಲ್ ಇದ್ದರು.