ಉ.ಕೊರಿಯಾ : ದೀರ್ಘ ಶ್ರೇಣಿಯ ಕ್ರೂಸ್‌ಕ್ಷಿಪಣಿ ಉಡಾವಣೆ

ಪ್ಯೋಂ ಗ್ಯಾಂಗ್, ಅ.13: ಎರಡು ದೀರ್ಘಶ್ರೇಣಿಯ ಕ್ರೂಸ್ ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಅಧ್ಯಕ್ಷ ಕಿಮ್ ಜೋಂಗ್ ಉನ್ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಈ ಅಸ್ತçಗಳನ್ನು ಸೇನೆಯ ಕ್ಷಿಪಣಿ ತುಕಡಿ ವಿಭಾಗದಲ್ಲಿ ನಿಯೋಜಿಸಲಾಗಿದೆ ಎಂದು ಉತ್ತರ ಕೊರಿಯಾ ಗುರುವಾರ ಹೇಳಿದೆ.
ಎರಡು ಕ್ರೂಸ್ ಕ್ಷಿಪಣಿಗಳ ಬುಧವಾರದ ಪರೀಕ್ಷೆಯು ಶಸ್ತ್ರಾಸ್ತ್ರ ಗಳ ಯುದ್ಧ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇವುಗಳನ್ನು ಯುದ್ಧತಂತ್ರದ ಅಣುಬಾಂಬ್ ಕಾರ್ಯಾಚರಣೆಗಾಗಿ ಕೊರಿಯನ್ ಪೀಪಲ್ಸ್ ಆರ್ಮಿ(ಉತ್ತರ ಕೊರಿಯಾ ಸೇನೆ)ಯ ಘಟಕಗಳಲ್ಲಿ ನಿಯೋಜಿಸಲಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಕಡಿಮೆ ಎತ್ತರದಲ್ಲಿ ಚಲಿಸುವ ಕ್ರೂಸ್ ಕ್ಷಿಪಣಿಗಳನ್ನು ಪತ್ತೆಹಚ್ಚಿ ಪ್ರತಿಬಂಧಿಸುವುದು ಸುಲಭವಲ್ಲ. ಇವು ಸಮುದ್ರದ ಮೇಲೆ 2000 ಕಿ.ಮೀ ಎತ್ತರದಲ್ಲಿ ಹಾರಿ ಗುರಿಯತ್ತ ಚಲಿಸುತ್ತವೆ ಎಂದು ಉತ್ತರ ಕೊರಿಯಾ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಕೆಸಿಎನ್‌ಎ ವರದಿ ಮಾಡಿದೆ.
ಅಧ್ಯಕ್ಷ ಕಿಮ್ ಕ್ಷಿಪಣಿ ಪರೀಕ್ಷೆಯ ಬಗ್ಗೆ ಅತ್ಯಂತ ತೃಪ್ತಿ ವ್ಯಕ್ತಪಡಿಸಿದ್ದು, ಇದು ದೇಶದ ಪರಮಾಣು ಯುದ್ಧಪಡೆಗಳು ಯುದ್ಧಕ್ಕೆ ಸಂಪೂರ್ಣ ಸನ್ನದ್ಧವಾಗಿರುವುದನ್ನು ತೋರಿಸುತ್ತದೆ ಮತ್ತು ಶತ್ರುಗಳಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದೆ ಎಂದವರು ಶ್ಲಾಘಿಸಿದ್ದಾರೆ ಎಂದು ವರದಿ ಹೇಳಿದೆ.