ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಭಾರತೀಯ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಸ್ವದೇಶಕ್ಕೆ ಮರಳುವ ಸಾಧ್ಯತೆ ಕಡಿಮೆ
ವರದಿ

PHOTO: PTI
ಹೊಸದಿಲ್ಲಿ: ಜಾಗತಿಕ ಸರಾಸರಿಗೆ ಹೋಲಿಸಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಭಾರತೀಯರು ಅಲ್ಲೇ ಉಳಿದುಕೊಂಡು, ಉದ್ಯೋಗಸ್ಥರಾಗುವ ಸಾಧ್ಯತೆ ಅಧಿಕವೆಂದು ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿಗಾಗಿನ ಸಂಘಟನೆ (ಓಇಸಿಡಿ) ಗುರುವಾರ ತಿಳಿಸಿದೆ.
ಓಇಸಿಡಿಯು ದೊಡ್ಡ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ವಲಸಿಗರನ್ನು ಆಕರ್ಷಿಸುತ್ತಿರುವ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಸಂಘಟನೆಯಾಗಿದೆ. ಓಇಸಿಡಿ ಸಿದ್ಧಪಡಿಸಿದ ‘ಅಂತಾರಾಷ್ಟ್ರೀಯ ವಲಸೆ ಹೊರನೋಟ 2022’ ವರದಿಯನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ.
2020ರಲ್ಲಿ ಓಇಸಿಡಿ ದೇಶಗಳಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ 9.7 ಲಕ್ಷ ಮಂದಿ ಚೀನಾದವರಾಗಿದ್ದು, ಶೇ.22ರಷ್ಟಿದ್ದಾರೆ. ಓಇಸಿಡಿ ದೇಶಗಳಲ್ಲಿ 4.36 ಲಕ್ಷ ಭಾರತೀಯ ವಿದ್ಯಾರ್ಥಿಗಳಿದ್ದು, ಅವರ ಪ್ರಮಾಣ ಶೇ.10 ಆಗಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಜನಸಂಖ್ಯೆಗೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳು, ತಾವು ಅಧ್ಯಯನ ನಡೆಸಿದ ದೇಶದಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಆದರೆ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸ್ವದೇಶಕ್ಕೆ ಹಿಂದಿರುಗುವ ಚೀನಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವೆಂದು ವರದಿ ತಿಳಿಸಿದೆ.
ಚೀನಿಯರಿಗೆ ಹೋಲಿಸಿದರೆ, ಹೆಚ್ಚಿನ ಸಂಖ್ಯೆಯ ಭಾರತೀಯರು ಓಇಸಿಡಿ ದೇಶಗಳಲ್ಲಿ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಓಇಸಿಡಿ ದೇಶಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ವಿಷಯಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಅತಿಯಾದ ಪ್ರಾತಿನಿಧ್ಯವಿದೆ ಎಂದು ವರದಿ ತಿಳಿಸಿದೆ.







