ನಾವು ತೈಲವನ್ನು ಆಯುಧವಾಗಿ ಬಳಸುವುದಿಲ್ಲ : ಅಮೆರಿಕಕ್ಕೆ ಸೌದಿ ತಿರುಗೇಟು

ರಿಯಾದ್, ಅ.13: ತೈಲ ಉತ್ಪಾದನೆ ಕಡಿತಗೊಳಿಸುವ ನಿರ್ಧಾರವನ್ನು ಮುಂದೂಡಿದರೆ ಅದು ವಿಶ್ವದ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಸೌದಿ (Saudi)ಅರೆಬಿಯಾವು ಅಮೆರಿಕಕ್ಕೆ ಸ್ಪಷ್ಟಪಡಿಸಿದೆ ಎಂದು ಸೌದಿಯ ವಿದೇಶಾಂಗ ಇಲಾಖೆ ಹೇಳಿದೆ.
ತೈಲ ಉತ್ಪಾದನೆ ಕಡಿತಗೊಳಿಸುವ ಬಗ್ಗೆ ಒಪೆಕ್( ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ) ಹಾಗೂ ಅದರ ಮಿತ್ರದೇಶಗಳು ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡನ್(Joe Biden) , ಈ ನಿರ್ಧಾರದಲ್ಲಿ ದೂರದೃಷ್ಟಿಯ ಕೊರತೆಯಿದೆ ಮತ್ತು ಇದು ಅಮೆರಿಕ-ಸೌದಿ ಅರೆಬಿಯಾ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸೌದಿ ಅರೆಬಿಯಾ, ಅಂತರಾಷ್ಪ್ರಿಯಯ ಘರ್ಷಣೆಯ ಸಂದರ್ಭ ಸೌದಿ ಅರೆಬಿಯಾ ಯಾವ ಪಕ್ಷದ ಪರವೂ ನಿಲ್ಲುವುದಿಲ್ಲ ಮತ್ತು ರಾಜಕೀಯ ಕಾರಣಗಳಿಗಾಗಿ ಯಾವುದೇ ನಿರ್ಧಾರಗಳನ್ನು ಒಪೆಕ್ ಸಂಘಟನೆ ಕೈಗೊಳ್ಳುವುದಿಲ್ಲ. ಎಲ್ಲಾ ಆರ್ಥಿಕ ವಿಶ್ಲೇಷಣೆಗಳು ಸೂಚಿಸಿರುವ ಪ್ರಕಾರ, ಒಪೆಕ್ ನಿರ್ಧಾರವನ್ನು ಒಂದು ತಿಂಗಳು ಮುಂದೂಡುವುದು ಋಣಾತ್ಮಕ ಆರ್ಥಿಕ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಅಮೆರಿಕಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದೆ.
ಸೌದಿ ಅರೆಬಿಯಾವು ತೈಲವನ್ನು ರಾಜಕೀಯಗೊಳಿಸುವುದಿಲ್ಲ. ತೈಲವನ್ನು ಆಯುಧದ ರೀತಿಯಲ್ಲಿ ನಾವು ಪರಿಗಣಿಸುವುದಿಲ್ಲ. ತೈಲವನ್ನು ನಮ್ಮ ಸರಕು ಎಂದು ನೋಡುತ್ತೇವೆ. ತೈಲ ಮಾರುಕಟ್ಟೆಗೆ ಸ್ಥಿರತೆ ತರುವುದು ನಮ್ಮ ಉದ್ದೇಶವಾಗಿದೆ. ಹಲವು ದಶಕಗಳಿಂದಲೂ ಈ ವಿಷಯದಲ್ಲಿ ನಮ್ಮ ದಾಖಲೆಗಳು ಅತ್ಯಂತ ಸ್ಪಷ್ಟವಾಗಿದೆ ಎಂದು ಸೌದಿ ಅರೆಬಿಯಾದ ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಅದಿಲ್ ಅಲ್-ಜುಬೇರ್ ಹೇಳಿದ್ದಾರೆ.
ಅಮೆರಿಕ-ಸೌದಿಯ ಮಧ್ಯೆ, ತೀವ್ರವಾದ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟದ ರೀತಿಯ ಶಾಶ್ವತ ಹಿತಾಸಕ್ತಿಗೆ ಸಂಬಂದಿಸಿದ ಸಂಬಂಧವಿದ್ದು ಇದು ಅತ್ಯಂತ ಬಲಿಷ್ಟ ಸಂಬಂಧವಾಗಿದೆ ಎಂದವರು ಹೇಳಿದ್ದಾರೆ.
ಬೇಡಿಕೆ ಮತ್ತು ಹೂಡಿಕೆಯ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸುವುದು ನಮ್ಮ ಈಗಿನ ಆದ್ಯತೆಯಾಗಿದೆ. ಒಪೆಕ್ ಹಾಗೂ ಮಿತ್ರರಾಷ್ಟçಗಳ ನಡುವಿನ ಒಪ್ಪಂದವು ಸರ್ವಾನುಮತದಿಂದ ಕೂಡಿತ್ತು ಮತ್ತು ಮಾರುಕಟ್ಟೆಯ ಚಂಚಲತೆಯನ್ನು ನಿಗ್ರಹಿಸುವ ಉದ್ದೇಶ ಹೊಂದಿದೆ ಎಂದು ಸೌದಿ ಅರೆಬಿಯಾದ ಇಂಧನ ಸಚಿವ ಯುವರಾಜ ಅಬ್ದುಲಝೀಝ್ ಬಿನ್ ಸಲ್ಮಾನ್ (Abdulaziz bin Salman)ಹೇಳಿದ್ದಾರೆ.