ನಿಷೇಧಿತ ಪಿಎಫ್ಐ ಸಂಘಟನೆಯ ಐದು ಮಂದಿ ಮುಖಂಡರ ಬಂಧನ: ಕಮಿಷನರ್ ಶಶಿಕುಮಾರ್
ಫೈಲ್ ಫೋಟೊ
ಮಂಗಳೂರು : ನಗರದ ಬಂದರ್ ಧಕ್ಕೆಯಲ್ಲಿರುವ ಹೊಟೇಲೊಂದರಲ್ಲಿ ಸಭೆ ಸೇರಿ ದಾಳಿ ನಡೆಸಲು ಸಂಚು ಹೂಡುತ್ತಿದ್ದ ಆರೋಪದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಐವರು ಮುಖಂಡರನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರು ಗುರುವಾರ ಮುಂಜಾನೆ ಬಂಧಿಸಿದ್ದಾರೆ.
ಬಂಧಿತರನ್ನು ಜೋಕಟ್ಟೆಯ ಮುಹಮ್ಮದ್ ರಫೀಕ್ ಯಾನೆ ಶಾರ್ಟ್ ರಫೀಕ್, ಕಸಬಾ ಬೆಂಗರೆಯ ಮುಹಮ್ಮದ್ ಬಿಲಾಲ್, ಉಳ್ಳಾಲ ಠಾಣಾ ವ್ಯಾಪ್ತಿಯ ಮುಹಮ್ಮದ್ ರಫೀಕ್, ಅಬ್ಬಾಸ್ ಕಿನ್ಯ, ಅಕ್ಬರ್ ಸಿದ್ದೀಕ್ ಅಡ್ಯಾರ್ ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆ.121, 121 ಎ, 109. 153 ಎ ಮತ್ತು ಯುಎಪಿಎ ಕಾಯ್ದೆ 167ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಸಂಘ ಪರಿವಾರದ ಮುಖಂಡರ ಮೇಲೆ, ಕೇಂದ್ರ ಮತ್ತು ರಾಜ್ಯ ಸರಕಾರದ ಕೆಲವು ವ್ಯಕ್ತಿಗಳ ಮೇಲೆ ಹಾಗೂ ಪ್ರತಿಭಟನೆಯ ಹೆಸರಿನಲ್ಲಿ ಸರಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಸಂಚು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಪಿಎಫ್ಐ ನಾಯಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 12 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.