ರಾಣಿ ಕೆಮಿಲ್ಲಾ ಪಟ್ಟಾಭಿಷೇಕಕ್ಕೆ ಕೊಹಿನೂರ್ ವಜ್ರದ ಕಿರೀಟ ಧರಿಸುತ್ತಾರೆಯೇ ?

ರಾಣಿ ಕೆಮಿಲ್ಲಾ
ಲಂಡನ್: ಮುಂದಿನ ಮೇ ತಿಂಗಳಲ್ಲಿ ನಡೆಯುವ ಪಟ್ಟಾಭಿಷೇಕ ಸಮಾರಂಭದಲ್ಲಿ ಇಂಗ್ಲೆಂಡ್ನ ರಾಜ ಚಾರ್ಲ್ಸ್ ಅವರ ಪತ್ನಿ ರಾಣಿ ಕೆಮಿಲ್ಲಾ (Camilla, queen) ಅಮೂಲ್ಯ ಕೊಹಿನೂರ್ ವಜ್ರ(Kohinoor diamond)ದಿಂದ ಕೂಡಿದ ಕಿರೀಟವನ್ನು ಧರಿಸುತ್ತಾರೆಯೇ ಎನ್ನುವ ಬಗ್ಗೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ರಾಜಮಾತೆಯ ಕಿರೀಟವನ್ನು ಕಿಂಗ್ ಜಾರ್ಜ್6 (King George VI) ಅವರ ರಾಣಿಯಾಗಿ ಪಟ್ಟಾಭಿಷೇಕಗೊಳ್ಳುವ ವೇಳೆ ರಾಣಿ ಎಲಿಝಬೆತ್ (Queen Elizabeth)ಗಾಗಿ 1937ರಲ್ಲಿ ಸಿದ್ಧಪಡಿಸಲಾಗಿತ್ತು. ಇದು ವಿಶ್ವದ ಅತ್ಯಂತ ಅಮೂಲ್ಯ ಎನಿಸಿದ 105.6 ಕ್ಯಾರೆಟ್ನ ಕೊಹಿನೂರ್ ವಜ್ರವನ್ನು ಒಳಗೊಂಡಿದ್ದು, ಬೇರ್ಪಡಿಸಬಹುದಾದ ಪ್ಲಾಟಿನಂ ಚೌಕಟ್ಟಿನಲ್ಲಿ ಇರಿಸಲಾಗಿದೆ.
1849ರಲ್ಲಿ ನಡೆದ ಎರಡನೇ ಆಂಗ್ಲೋ- ಸಿಕ್ಖ್ ಯುದ್ಧದಲ್ಲಿ ಸಿಕ್ಖರು ಸೋತ ಬಳಿಕ ಇದನ್ನು ಕೊಳ್ಳೆಹೊಡೆಯಲಾಗಿತ್ತು ಹಾಗೂ ಲಾರ್ಡ್ ಡಾಲ್ಹೌಸಿ ಇದನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿದ್ದ.
1901ರಲ್ಲಿ ರಾಣಿ ವಿಕ್ಟೋರಿಯಾ ಮೃತಪಟ್ಟ ಬಳಿಕ ರಾಣಿ ಅಲೆಗ್ಸಾಂಡ್ರಾ ಅವರ ಕಿರೀಟಕ್ಕೆ ಕೊಹಿನೂರು ವಜ್ರ ಅಳವಡಿಸಲಾಯಿತು. ಬಳಿಕ 1911ರ ಮೇ ತಿಂಗಳಲ್ಲಿ ರಾಣಿ ಮೇರಿ ಅವರಿಗೆ ವರ್ಗಾಯಿಸಲಾಯಿತು. ಅಂತಿಮವಾಗಿ 1937ರಲ್ಲಿ ರಾಜಮಾತೆಯ ಕಿರೀಟಕ್ಕೆ ಜೋಡಿಸಲಾಯಿತು. ಈ ವಜ್ರ ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂಬ ನಂಬಿಕೆಯಿಂದ ಇಂಗ್ಲೆಂಡ್ ರಾಜ ಇದನ್ನು ಎಂದೂ ಧರಿಸಿಲ್ಲ ಎಂದು ವರದಿಯಾಗಿದೆ.
ಈ ವಜ್ರದ ಮಾಲಕತ್ವದ ಬಗ್ಗೆ ಭಾರತದ ಜತೆ ವ್ಯಾಜ್ಯ ಇರುವ ಹಿನ್ನೆಲೆಯಲ್ಲಿ ರಾಣಿ ಕೆಮಿಲ್ಲಾ ಈ ಕಿರೀಟ ಧರಿಸುತ್ತಾರೆಯೇ ಎನ್ನುವುದು ರಾಜಕೀಯ ಸೂಕ್ಷ್ಮ ವಿಚಾರವಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಈ ಬಗ್ಗೆ ಬಕಿಂಗ್ಹ್ಯಾಂ ಅರಮನೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ರಾಜ ಚಾರ್ಲ್ಸ್ 3 ಮತ್ತು ರಾಣಿಪತ್ನಿ ಕೆಮಿಲ್ಲಾ ಅವರ ಪಟ್ಟಾಭಿಷೇಕ ಸಮಾರಂಭ ವೆಸ್ಟ್ ಮಿನಿಸ್ಟರ್ ಅಬ್ಬೇಯಲ್ಲಿ 2023ರ ಮೇ 6ರಂದು ನಿಗದಿಯಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.







