ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿಗೆ ಥಳಿಸಿದ ಪೌರ ಕಾರ್ಮಿಕರು

Photo: ndtv.com
ಇಂದೋರ್: ಪೌರ ಕಾರ್ಮಿಕರು ಹಾಗೂ ಅವರ ಸಂಬಂಧಿಕರ ಗುಂಪೊಂದು ಗುರುವಾರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ರಾವು ಪುರಸಭೆಯ ಬಿಜೆಪಿ ಕಾರ್ಪೊರೇಟರ್ ಪತಿಗೆ ಥಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳಾ ಕಾರ್ಮಿಕರನ್ನು ದೂರವಾಣಿ ಮೂಲಕ ನಿಂದಿಸಿದ ಆರೋಪದ ಮೇಲೆ ಸಂದೀಪ್ ಚೋಹಾನ್ ವಿರುದ್ಧ ದೂರು ನೀಡಲು ಪೌರ ಕಾರ್ಮಿಕರ ಗುಂಪು ಮಧ್ಯಾಹ್ನ ಪೊಲೀಸ್ ಠಾಣೆಗೆ ಆಗಮಿಸಿತು ಎಂದು ರಾವು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನರೇಂದ್ರ ಸಿಂಗ್ ರಘುವಂಶಿ ಪಿಟಿಐಗೆ ತಿಳಿಸಿದ್ದಾರೆ.
ಸಂದೀಪ್ ಚೋಹನ್ ಪತ್ನಿ ಪುರಸಭೆಯ ವಾರ್ಡ್ ಸಂಖ್ಯೆ 13 ರ ಕಾರ್ಪೊರೇಟರ್ ಆಗಿದ್ದಾರೆ.
"ಎರಡೂ ಕಡೆಯವರ ನಡುವೆ ಶಾಂತಿ ಸಂಧಾನ ನಡೆಸಲು ಚೋಹನ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಆದರೆ ಎರಡೂ ಕಡೆಯವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು ಹಾಗೂ ಗುಂಪಿನ ಕೆಲವು ಜನರು ಚೋಹನ್ ಗೆ ಹಲ್ಲೆ ನಡೆಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎರಡೂ ಕಡೆಯವರು ಪರಸ್ಪರ ಹಲ್ಲೆ ಮತ್ತು ಬೆದರಿಕೆಯ ದೂರುಗಳನ್ನು ದಾಖಲಿಸಿದ್ದಾರೆ ಎಂದು ರಘುವಂಶಿ ಹೇಳಿದರು.







