ಬಂಡೆ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಜ್ಞಾನೇಂದ್ರ, ಬಡವರ ವಿರೋಧಿ: ಕಿಮ್ಮನೆ ರತ್ನಾಕರ್ ಆಕ್ರೋಶ
ಕುರುವಳ್ಳಿ ಬಂಡೆ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ತೀರ್ಥಹಳ್ಳಿ, ಅ.14: ಮೇಲಿನ ಕುರುವಳ್ಳಿಯ ಬಡ ಬಂಡೆ ಕಾರ್ಮಿಕರಿಗೆ ಕೆಲಸಕೊಡಿ ಇಲ್ಲವೇ ಅನ್ನ ನೀಡಿ ಎಂಬ ಘೋಷಣೆಯೊಂದಿಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಕುರುವಳ್ಳಿಯ ಕಲ್ಲುಕುಟಿಕರ ಮತ್ತು ಬಂಡೆ ಕಾರ್ಮಿಕರ ಸಹಕಾರ ಸಂಘ ತೀರ್ಥಹಳ್ಳಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಹಯೋಗದೊಂದಿಗೆ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್, ಸಚಿವ ಆರಗ ಜ್ಞಾನೇಂದ್ರ ರವರಿಗೆ ಮಾನವೀಯತೆ ಇದ್ದರೆ ಬಡ ಕಾರ್ಮಿಕರ ಸಮಸ್ಯೆ ಬಗೆಹರಿಸುತ್ತಿದ್ದರು. ತಮ್ಮ ಪಕ್ಷದ ಹಿತಾಸಕ್ತಿಯೆ ಮುಖ್ಯ ಎಂದು ಬಿಜೆಪಿ ಮುಖಂಡರಿಗೆ ಲೀಸ್ ಕೊಡಿಸಿ,ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಾರ್ಮಿಕರ ವಿರೋಧಿ ಕೃತ್ಯದಲ್ಲಿ ತೊಡಗಿದ್ದಾರೆ ಎಂದರು.
'ಕೆಲವೇ ತಿಂಗಳಲ್ಲಿ ಚುನಾವಣೆ ಬರಲಿದ್ದು ಓಟ್ ಬ್ಯಾಂಕ್ ಗೋಸ್ಕರ ಕೆಲವು ಬಂಡೆ ಕಾರ್ಮಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಮನುಷ್ಯತ್ವಕ್ಕಿಂತ ರಾಜಕೀಯವೇ ಮುಖ್ಯ ಎನ್ನುವ ಗೃಹ ಸಚಿವರು ಮೊದಲಿನಿಂದಲೂ ಮಾಡಿದ್ದು ದ್ವೇಷದ ರಾಜಕಾರಣ, ಬಿಜೆಪಿಯವರಿಗೆ ಬಡವರ ಬದುಕು, ಹಸಿವಿಗಿಂತ ದ್ವೇಷ ಮುಖ್ಯವಾಗಿದೆ' ಎಂದರು.
ಜಿಲ್ಲಾಡಳಿತ ಬಂಡೆ ಸಮಸ್ಯೆಯನ್ನು ಮುಂದೆಯು ಬಗೆಹರಿಸದಿದ್ದರೆ ತಾಲೂಕಿನ ಮೇಲಿನ ಕುರುವಳ್ಳಿಯಿಂದ ಗೃಹ ಸಚಿವ ಜ್ಞಾನೇಂದ್ರರವರ ಗುಡ್ಡೆಕೊಪ್ಪದ ಮನೆಯತನಕ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದರು.
ಈ ಪ್ರತಿಭಟನಾ ಸತ್ಯಾಗ್ರಹದಲ್ಲಿ ಕಲ್ಲುಕುಟಿಕರ ಸಂಘದ ಅಧ್ಯಕ್ಷ ನಾಗೇಂದ್ರ,ಮೇಲಿನಕುರುವಳ್ಳಿ ಗ್ರಾಪಂ ಅಧ್ಯಕ್ಷೆ ಭವ್ಯ,ಸದಸ್ಯರಾದ ನಿಶ್ಚಲ್ ಶೆಟ್ಟಿ,ಆನಂದ್,ಯು.ಡಿ. ವೆಂಕಟೇಶ್,ನಾಗರಾಜ್ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಕೆಸ್ತೂರ್ ಮಂಜುನಾಥ್, ಕಡ್ತೂರು ದಿನೇಶ್,ಕೆಳಕೆರೆ ದಿವಾಕರ್,ಅಮ್ರಪಾಲಿ ಸುರೇಶ್,ಕಿಶೋರ್,ಶೃತಿ ವೆಂಕಟೇಶ್,ಗೀತಾ ರಮೇಶ್,ಮಂಜುಳಾ ನಾಗೇಂದ್ರ,ರಹಮತ್ ಅಝಾದಿ ಮುಂತಾದವರಿದ್ದರು.