ಪಡುಬಿದ್ರಿ ಬೀಚ್‍ಗೆ ಮೂರನೇ ಬಾರಿ 'ಬ್ಲೂಫ್ಲ್ಯಾಗ್' ಮಾನ್ಯತೆ

ಪಡುಬಿದ್ರಿ: ಪಡುಬಿದ್ರಿ (Padubidri) ಎಂಡ್ ಪಾಯಿಂಟ್ ಬೀಚ್‍ಗೆ ಮೂರನೇ ಬಾರಿ ವಿಶ್ವ ಮಾನ್ಯತೆಯ 'ಬ್ಲೂಫ್ಲ್ಯಾಗ್' (Blue Flag beach)ಮಾನ್ಯತೆ ಪಡೆದಿದೆ.
ಪೌಂಡೇಶನ್ ಫಾರ್ ಎನ್ವಾರ್ನ್ಮೆಂಟಲ್ ಎಜ್ಯುಕೇಶನ್ (ಡೆನ್ಮಾರ್ಕ್) ಸಂಸ್ಥೆಯ ಬ್ಲೂಫ್ಲ್ಯಾಗ್ ಪರಿಕಲ್ಪನೆಯ ವಿಶ್ವದರ್ಜೆಯ 33 ಮಾನದಂಡಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿರುವ ಭಾರತದ ಕೆಲವೇ ಕೆಲವು ಬೀಚ್‍ಗಳ ಪೈಕಿ ಪಡುಬಿದ್ರಿ ಎಂಡ್ ಪಾಯಿಂಟ್‍ನ ಸಮುದ್ರ ಕಿನಾರೆಗೆ ಸತತ ಮೂರನೇ ಬಾರಿಗೆ ವಿಶ್ವದರ್ಜೆಯ ಬ್ಲೂಫ್ಲ್ಯಾಗ್ ಮಾನ್ಯತೆಯೊಂದಿಗೆ ಮನ್ನಣೆ ಲಭಿಸಿರುವುದು ಉಡುಪಿ ಜಿಲ್ಲೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ (ಪ್ರಭಾರ) ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.
ಕಡಲ ತೀರದ ಪರಿಸರ ಶಿಕ್ಷಣ ಮತ್ತು ಮಾಹಿತಿ, ಪರಿಸರ ನಿರ್ವಹಣೆ, ನೀರಿನ ಗುಣಮಟ್ಟ, ಸುರಕ್ಷತೆ ಮತ್ತು ಸೇವೆಯ ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡು ಒಟ್ಟು 33 ಮಾನದಂಡಗಳನ್ನು ಪರಿಗಣಿಸಿ ಅಪಾಯಕಾರಿಯಲ್ಲದ ಅತೀ ಶುಚಿತ್ವವಾದ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವಂತಹ ಪಡುಬಿದ್ರಿ ಎಂಡ್ ಪಾಯಿಂಟ್ ಕಡಲ ತೀರಕ್ಕೆ ಬ್ಲೂಫ್ಲ್ಯಾಗ್ ಮಾನ್ಯತೆ ನೀಡಲಾಗಿತ್ತು.