ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗಡುವಿನೊಳಗೆ ಸಹಿ ಬೀಳದು : ಬ್ರಿಟನ್

Photo : NDTV
ಲಂಡನ್, ಅ.14: ಭಾರತ ಮತ್ತು ಬ್ರಿಟನ್ (India and Britain)ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ದೀಪಾವಳಿ ಅಥವಾ ಅಕ್ಟೋಬರ್ ಗಡುವಿನ ಅಂತ್ಯದೊಳಗೆ ಸಹಿ ಬೀಳುವ ಸಾಧ್ಯತೆಯಿಲ್ಲ ಎಂದು ಬ್ರಿಟನ್ನ ವಾಣಿಜ್ಯ ಕಾರ್ಯದರ್ಶಿ ಕೆಮಿ ಬಡೆನೋಚ್(Chemie Badenoch) ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಒಪ್ಪಂದ ಅಂತಿಮ ಹಂತದಲ್ಲಿದ್ದು ನಾವು ಹತ್ತಿರದಲ್ಲೇ ಇದ್ದೇವೆ. ಆದರೆ ಒಂದಂತೂ ಸ್ಪಷ್ಟ, ದೀಪಾವಳಿ ಗಡುವಿನಲ್ಲಿ ಇದು ಸಾಧ್ಯವಿಲ್ಲ. ಒಪ್ಪಂದಕ್ಕೆ ಎಷ್ಟು ಬೇಗ ಸಹಿ ಬೀಳುತ್ತದೆ ಎಂಬುದಕ್ಕಿಂತ ಒಪ್ಪಂದದ ಗುಣಮಟ್ಟ ನಮಗೆ ಮುಖ್ಯ ಎಂದು ಬಡೆನೋಚ್ ಹೇಳಿದ್ದಾರೆ.
ಬ್ರಿಟನ್ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson)ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi)2021ರ ಮೇ ತಿಂಗಳಿನಲ್ಲಿ ಉಭಯ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದರು. 2022ರ ದೀಪಾವಳಿ ಸಂದರ್ಭ ಒಪ್ಪಂದಕ್ಕೆ ಸಹಿ ಬೀಳಲಿದೆ ಎಂದು ಎಪ್ರಿಲ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಬೋರಿಸ್ ಜಾನ್ಸನ್ ಹೇಳಿದ್ದರು.
ಈ ವ್ಯಾಪಾರ ಒಪ್ಪಂದವು ಬ್ರಿಟನ್ನ ವ್ಯಾಪಾರ ವಹಿವಾಟನ್ನು 2035ರ ವೇಳೆಗೆ ವಾರ್ಷಿಕವಾಗಿ 27.91 ಲಕ್ಷ ಕೋಟಿಯಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ಬ್ರಿಟನ್ ನಾದ್ಯಂತ ಆದಾಯವನ್ನು 29,091 ಕೋಟಿ ರೂ.ನಷ್ಟು ಹೆಚ್ಚಿಸಲಿದೆ. ಭಾರತೀಯರಿಗೆ ವಲಸೆ ನಿಯಮಗಳನ್ನು ಸಡಿಲಿಸುವುದು ಒಪ್ಪಂದದ ಭಾಗವಾಗಿದೆ.
ಭಾರತೀಯರಿಗೆ ವಲಸೆ ನಿಯಮ ಸಡಿಲಿಕೆ ಬಗ್ಗೆ ಬ್ರಿಟನ್ನ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್ಮನ್ ಆತಂಕ ವ್ಯಕ್ತಪಡಿಸಿದ ತರುವಾಯ ಈ ಒಪ್ಪಂದ ಪತನದ ಅಂಚಿನಲ್ಲಿದೆ ಎಂದು `ದಿ ಟೈಮ್ಸ್' (``The Times'')ವರದಿ ಮಾಡಿದ ಮರುದಿನವೇ ಕೆಮಿ ಬಡೆನೋಚ್ ಹೇಳಿಕೆ ಹೊರಬಿದ್ದಿದೆ.