ಭಾರತದ ವಿದ್ಯಾರ್ಥಿಗೆ ಇರಿತ ಪ್ರಕರಣ ಜನಾಂಗೀಯ ದಾಳಿ: ಆರೋಪ

ಸಿಡ್ನಿ, ಅ.14: ಅಕ್ಟೋಬರ್ 6ರಂದು ಆಸ್ಟ್ರೇಲಿಯಾ(Australia) ದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ನಡೆದ ಚೂರಿ ಇರಿತ(stabbing)ವು ಜನಾಂಗೀಯ ದಾಳಿ ಪ್ರಕರಣವಾಗಿದೆ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಕ್ಟೋಬರ್ 6ರಂದು ನ್ಯೂಸೌತ್ವೇಲ್ಸ್ ರಾಜ್ಯದ ಪೆಸಿಫಿಕ್ ಹೆದ್ದಾರಿಯಲ್ಲಿ ಶುಭಮ್ ಗರ್ಗ್(Shubham Garg) ಎಂಬ ವಿದ್ಯಾರ್ಥಿಯನ್ನು ವ್ಯಕ್ತಿಯೊಬ್ಬ 11 ಬಾರಿ ಚೂರಿ ಇರಿಯಿಂದ ಇರಿದಿದ್ದ. ಬಳಿಕ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಹೇಳಿಕೆ ನೀಡಿರುವ ಗರ್ಗ್ನ ತಂದೆ, ಇದು ಜನಾಂಗೀಯ ದಾಳಿಯಾಗಿದೆ ಎಂದಿದ್ದಾರೆ. ಮಗನ ಹೊಟ್ಟೆಗೆ 11 ಶಸ್ತ್ರಚಿಕಿತ್ಸೆ ನಡೆಸಿದ್ದು ಆತನ ಆರೋಗ್ಯಸ್ಥಿತಿ ಗಂಭೀರವಾಗಿದೆ. ಮಗನ ಚಿಕಿತ್ಸೆಗೆ ನೆರವಾಗುವಂತೆ ಮತ್ತು ಕಿರಿಯ ಪುತ್ರನಿಗೆ ವೀಸಾ ಒದಗಿಸುವಂತೆ ಸರಕಾರವನ್ನು ಕೋರಿರುವುದಾಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯನ್ ಹೈಕಮಿಷನ್ನ ವಕ್ತಾರರು ` ಸಿಡ್ನಿಯಲ್ಲಿರುವ ಭಾರತೀಯ ದೂತಾವಾಸವು ಕಾನ್ಸುಲರ್ ನೆರವು ಒದಗಿಸಿದೆ. ಕುಟುಂಬದ ಸದಸ್ಯರಿಗೆ ವೀಸಾ ಒದಗಿಸಲು ಆಸ್ಟ್ರೇಲಿಯನ್ ಹೈಕಮಿಷನ್ ನೆರವಾಗಲಿದೆ' ಎಂದಿದ್ದಾರೆ.





