ಆಸ್ಟ್ರೇಲಿಯಾ: ನಿರಂತರ ಮಳೆ, ಪ್ರವಾಹದಿಂದ ಕನಿಷ್ಟ 20 ಮಂದಿ ಮೃತ್ಯು

ಕ್ಯಾನ್ಬೆರ, ಅ.14: ಆಸ್ಟ್ರೇಲಿಯಾ(Australia)ದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಪ್ರವಾಹ ತಲೆದೋರಿದ್ದು ಸುಮಾರು 500 ಮನೆಗಳು ಜಲಾವೃತಗೊಂಡಿವೆ. ಮಳೆ ಮತ್ತು ಪ್ರವಾಹದಿಂದ ಕನಿಷ್ಟ 20 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸುಮಾರು 5 ಮಿಲಿಯ ಮಂದಿ ವಾಸಿಸುವ ಕರಾವಳಿ ರಾಜಧಾನಿ ಮೆಲ್ಬೋರ್ನ್(Melbourne) ಸೇರಿದಂತೆ ಆಸ್ಟ್ರೇಲಿಯಾದ ಆಗ್ನೇಯ(Southeast) ನಗರಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮೆಲ್ಬೋರ್ನ್ ನಲ್ಲಿ ಸುಮಾರು 500 ಮನೆಗಳು ನೀರಿನಲ್ಲಿ ಮುಳುಗಿದ್ದು ಪೀಡಿತ ಪ್ರದೇಶಗಳಲ್ಲಿ ಸ್ಥಳಾಂತರಕ್ಕೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾದ ನ್ಯೂಸೌತ್ ವೇಲ್ಸ್ (New South Wales)ಮತ್ತು ವಿಕ್ಟೋರಿಯಾ(Victoria), ದ್ವೀಪರಾಜ್ಯ ತಾಸ್ಮಾನಿಯಾದ್ಯಂತ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ವಿಕ್ಟೋರಿಯಾ ಪ್ರಾಂತದಲ್ಲಿ ಭಾರೀ ಪ್ರವಾಹದಿಂದ ವಿದ್ಯುತ್ ಪೂರೈಕೆ ಮೊಟಕುಗೊಂಡಿದ್ದು ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಇನ್ನೂ ಕೆಲವು ದಿನ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಪ್ರವಾಹ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ವಿಕ್ಟೋರಿಯಾ ರಾಜ್ಯದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಮುಂದಿನ 6ರಿಂದ 8 ವಾರದ ತನಕ ಮಳೆ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸಮಸ್ಯೆ ಈಗಷ್ಟೇ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆ್ಯಂಡ್ರ್ಯೂ ಹೇಳಿದ್ದಾರೆ. ಮೇರಿಬಿರ್ನಾಂಗ್ ನಗರದಲ್ಲೂ ಪ್ರವಾಹದ ಅಪಾಯ ಹೆಚ್ಚಿದ್ದು ಸುಮಾರು 60 ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ರ್ಯಾಂಡಾಲ್ ನಗರದಲ್ಲಿರುವ ಪರಿಹಾರ ಶಿಬಿರಗಳಿಗೆ ತೆರಳಲು ಜನರಿಗೆ ಸಲಹೆ ನೀಡಲಾಗಿದೆ.
ಸುಮಾರು 4,700 ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಕಳೆದ 2 ದಿನಗಳಲ್ಲಿ 108ಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಸೇವಾ ಇಲಾಖೆ ಮಾಹಿತಿ ನೀಡಿದೆ.







