ನಿರಾಶ್ರಿತರಿಗೆ ಸೇವೆ: ಯೋಗೇಶ್‍ಗೆ ಜಾಮಿಯಾ ಮಸೀದಿಯಲ್ಲಿ ಸನ್ಮಾನ

ಬೆಂಗಳೂರು, ಅ.14: ಜಾತಿ, ಧರ್ಮ ಭೇದಭಾವಿಲ್ಲದೆ ನಿರಾಶ್ರಿತರಿಗೆ ಸೇವೆ ಸಲ್ಲಿಸುತ್ತಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮ ಯೋಗೇಶ್ ಅವರಿಗೆ ನಗರದ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯಲ್ಲಿ ಸನ್ಮಾನಿಸಿ, ಸಹಾಯಧನ ವಿತರಣೆ ಮಾಡಲಾಯಿತು.
ಜನಸ್ನೇಹಿ ನಿರಾಶ್ರಿತರ ಆಶ್ರಮದ ಚಟುವಟಿಕೆಗಳನ್ನು ಗುರುತಿಸಿದ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಸಮಿತಿ ಸದಸ್ಯರು ಶುಕ್ರವಾರ ನಮಾಝ್ ಬಳಿಕ ಯೋಗೇಶ್ ಅವರಿಗೆ ಮಸೀದಿಯಲ್ಲಿಯೇ ಸನ್ಮಾನಿಸಿ ಗೌರವ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ, ಜಾತಿ, ಧರ್ಮ ಭೇದಭಾವಿಲ್ಲದೆ ಎಲ್ಲರಿಗೂ ಒಂದೇ ಮಾದರಿಯಲ್ಲಿ ಯುವಕ ಯೋಗೇಶ್ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ಅವರು ತಮ್ಮ ಆಶ್ರಮದಲ್ಲಿಟ್ಟು ಅವರಿಗೆ ಜೀವ ತುಂಬಿದ್ದಾರೆ.ಇಂತಹ ಸಹಬಾಳ್ವೆ ಕೆಲಸದಲ್ಲಿ ತೊಡಗಿಕೊಂಡಿರುವ ಅವರಿಗೆ ಗೌರವಿಸಿ ಸಣ್ಣ ಸಹಾಯ ಮಾಡಿದ್ದೇವೆ ಎಂದರು.
ಜನಸ್ನೇಹಿ ಯೋಗೇಶ್ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ. ನಾನು ಸಹ ಸಾಮಾನ್ಯ ಕುಟುಂಬದಿಂದ ಬಂದಿದ್ದೇನೆ. ಯಾವುದೇ ಅನುದಾನ, ಜನಪ್ರತಿನಿಧಿಗಳಿಂದ ಕಾಣಿಕೆ ಪಡೆಯದೆ ಇಲ್ಲಿನ ನೆಲಮಂಗಲ ಬಳಿಯ ಸೊಂಡಗುಪ್ಪದಲ್ಲಿ ಆಶ್ರಮ ನಡೆಸುತ್ತಿದ್ದು, ನಿರಾಶ್ರಿತರಿಗೆ ಆಸರೆಯಾಗಿದ್ದೇನೆ ಎಂದು ತಿಳಿಸಿದರು.
ನಮ್ಮ ಆಶ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರೇ ಇದ್ದು, ಯಾವುದೇ ಜಾತಿ, ಧರ್ಮದ ಆಧಾರವಿಲ್ಲದೆ, ಎಲ್ಲರಿಗೂ ಸಮಾನವಾಗಿ ಕಾಣುತ್ತೇವೆ. ಆಶ್ರಮ ಮಾತ್ರವಲ್ಲದೆ, ಬಡವರಿಗೆ ಆಹಾರ, ಶಾಲಾಮಕ್ಕಳಿಗೆ ಪುಸ್ತಕ, ಸಮವಸ್ತ್ರ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ಉಚಿತವಾಗಿಯೇ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.







