ಭಾರತದ ಆರ್ಥಿಕ ಬೆಳವಣಿಗೆ ಬಿಂಬಿಸಲು ಹಾವಾಡಿಗನ ಚಿತ್ರ ಬಳಸಿದ ಸ್ಪೇನ್ ದಿನಪತ್ರಿಕೆ

Photo : @Nithin0dha/Twitter
ಮ್ಯಾಡ್ರಿಡ್, ಅ.14: ಭಾರತದ ಆರ್ಥಿಕ ಬೆಳವಣಿ(Economic growth of India)ಗೆಯ ಕುರಿತ ವರದಿಯಲ್ಲಿ ಹಾವಿನ ಎದುರು ಪುಂಗಿಯೂದುವ ಹಾವಾಡಿಗನ ಚಿತ್ರ ಬಳಸುವ ಮೂಲಕ ಸ್ಪೇನ್ನ ಲಾ ವ್ಯಾನ್ಗುರಾಡಿಯಾ (Spain's La Vanguardia)ಪತ್ರಿಕೆ ವಿವಾದವನ್ನು ಹುಟ್ಟುಹಾಕಿದೆ.
ಅಕ್ಟೋಬರ್ 9ರಂದು ಪತ್ರಿಕೆಯ ಮುಖಪುಟದಲ್ಲಿ `ಭಾರತೀಯ ಆರ್ಥಿಕತೆಯ ಗಂಟೆ' (``Hour of Indian Economy'')ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಲೇಖನ ಮತ್ತದಕ್ಕೆ ಬಳಸಿದ ಹಾವಾಡಿಗನ ಚಿತ್ರದ ಮೂಲಕ ಪತ್ರಿಕೆಯು ಜನಾಂಗೀಯ ರೂಢ ಮಾದರಿಯನ್ನು ಪ್ರದರ್ಶಿಸಿದೆ ಎಂದು ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗಿದೆ.
ಭಾರತದ ಬಲಿಷ್ಟ ಅರ್ಥವ್ಯವಸ್ಥೆಯು ಜಾಗತಿಕ ಗಮನವನ್ನು ಸೆಳೆಯುತ್ತಿರುವಾಗ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ನಮ್ಮ ಚಿತ್ರವನ್ನು ಹಾವಾಡಿಗನಂತೆ ಬಿಂಬಿಸುವುದು ಮೂರ್ಖತನ. ವಿದೇಶಿ ಮನಸ್ಥಿತಿಯನ್ನು ವಸಾಹತುಶಾಹಿ ವಿಮೋಚನೆಗೊಳಿಸುವುದು ಸಂಕೀರ್ಣ ಪ್ರಯತ್ನವಾಗಿದೆ ಎಂದು ಬಿಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲೂ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅವರು ಎಷ್ಟೊಂದು ನಾಚಿಕೆಗೆಟ್ಟವರು. ಅವರು ಏನನ್ನು ಬಿಂಬಿಸಲು ಪ್ರಯತ್ನಿಸಿದರೂ ಪಾಶ್ಚಿಮಾತ್ಯ ವ್ಯಂಗ್ಯವನ್ನು ಲೆಕ್ಕಿಸದೆ ಭಾರತವು ಬೆಳೆಯುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.







