ಅಮೆರಿಕ: ಟರ್ಬನ್, ಗಡ್ಡದ ಸಹಿತ ಸೇನಾ ತರಬೇತಿಗೆ ಅವಕಾಶ ಕೋರಿದ ಸಿಖ್ ಯುವಕರು

Photo : Twitter/The Quint
ವಾಷಿಂಗ್ಟನ್, ಅ.14: ಅಮೆರಿಕದ ಮರೈನ್ ಕಾರ್ಪ್ಸ್(ಸಮುದ್ರ ಮತ್ತು ನೆಲದ ಮೇಲೆ ಕಾರ್ಯನಿರ್ವಹಿಸುವ ವಿಶಿಷ್ಟ ತುಕಡಿ)ಗೆ ಹೊಸದಾಗಿ ನೇಮಕಗೊಂಡಿರುವ ಮೂವರು ಸಿಖ್ ಯುವಕರು, ತಮಗೆ ಗಡ್ಡ ಮತ್ತು ಟರ್ಬನ್ ಸಹಿತ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಕೋರಿ ಫೆಡರಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮರೈನ್ ಕಾರ್ಪ್ಸ್ ನ ಪ್ರಾಥಮಿಕ ತರಬೇತಿ ಕೇಂದ್ರಕ್ಕೆ ಗಡ್ಡ ಹಾಗೂ ಟರ್ಬನ್ ಸಹಿತ ಪ್ರವೇಶಿಸಲು ಅವಕಾಶ ನೀಡಬೇಕೆಂದು ಕೋರಿ ಆಕಾಶ್ ಸಿಂಗ್, ಜಸ್ಕೀರತ್ ಸಿಂಗ್ ಹಾಗೂ ಮಿಲಾಪ್ ಸಿಂಗ್ ಚಹಾಲ್ ಸಲ್ಲಿಸಿದ್ದ ಅರ್ಜಿಯನ್ನು ಕೆಳನ್ಯಾಯಾಲಯ ತಳ್ಳಿಹಾಕಿದ ಬಳಿಕ ಸೆಪ್ಟಂಬರ್ ನಲ್ಲಿ ಅಪೀಲು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ರಾಷ್ಟ್ರೀಯ ಹಿತಾಸಕ್ತಿಗಾಗಿ ಏಕರೂಪತೆಯನ್ನು ಕಾಯ್ದುಕೊಳ್ಳಲು ತುಕಡಿಯ ನಿಯಮದ ಜಾರಿ ಅಗತ್ಯವಾಗಿದೆ ಎಂದು ಮರೈನ್ ಕಾರ್ಪ್ಸ್ ವಾದಿಸಿದೆ. ಪ್ರಾಥಮಿಕ ತರಬೇತಿಯ ಸಂದರ್ಭ ನೇಮಕಾತಿಯಲ್ಲಿ ಹೆಚ್ಚಿನ ಏಕರೂಪತೆಯನ್ನು ಒತ್ತಾಯಿಸುವ ಹಕ್ಕನ್ನು ಮರೈನ್ ಕಾರ್ಪ್ಸ್ ಹೊಂದಿದೆ ಎಂದು ನ್ಯಾಯ ಇಲಾಖೆಯ ನ್ಯಾಯವಾದಿ ಬ್ರಿಯಾನ್ ಸ್ಪಿಂಗರ್ ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶೆ ಪೆಟ್ರೀಷಿಯಾ ಮಿಲೆಟ್, ಈ ವಾದಕ್ಕೆ ಅರ್ಥವಿಲ್ಲ. ಯಾಕೆಂದರೆ ಆರಂಭಿಕ ತರಬೇತಿಯ ಸಂದರ್ಭ ಯಾರೂ ದಂಡಯಾತ್ರೆಯ ಶಕ್ತಿಯಾಗಿ ಹೊರಹೊಮ್ಮವುದಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಮರೈನ್ ಕಾರ್ಪ್ಸ್ ನ ವಕೀಲರು, ಬೂಟ್ ಕ್ಯಾಂಪ್(ಪ್ರಾಥಮಿಕ ತರಬೇತಿ ಶಿಬಿರ)ನಲ್ಲಿರುವ ಪ್ರತಿಯೊಬ್ಬರೂ ಏಕರೂಪದ ಗುರುತನ್ನು ಹೊಂದಿರುವುದು ಅಗತ್ಯವಾಗಿದೆ ಎಂಬ ಆಶಯದ ವಿರುದ್ಧ ಈ ಮೂವರು ಹೋರಾಡುತ್ತಿದ್ದಾರೆ. ಅರ್ಜಿದಾರರು ಅಸಾಮಾನ್ಯ ವಿನಾಯಿತಿ ಬಯಸುತ್ತಿದ್ದಾರೆ ಮತ್ತು ಮರೈನ್ ಕಾರ್ಪ್ಸ್ ನ ದೀರ್ಘಕಾಲದ ತರಬೇತಿ ಕಾರ್ಯನೀತಿಯಲ್ಲಿ ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.