2022 ರೊಳಗೆ 5 ಜಿ ನೆಟ್ವರ್ಕ್ ಹೊಂದಲು ಶೇ.5ರಷ್ಟು ಮೊಬೈಲ್ ಬಳಕೆದಾರರಿಗೆ ಮಾತ್ರ ಆಸಕ್ತಿ

PHOTO: PTI
ಹೊಸದಿಲ್ಲಿ,ಸೆ.14: 5ಜಿ ತಂತ್ರಜ್ಞಾನ ದೇಶಾದ್ಯಂತ ಲಭ್ಯವಾಗುವಂತೆ ಮಾಡಲು ಭಾರತ ಸನ್ನದ್ಧವಾಗುತ್ತಿದೆ. ಆದರೆ ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಪಾಲ್ಗೊಂಡವರಲ್ಲಿ ಕೇವಲ ಶೇ.2ರಷ್ಟು ಬಳಕೆದಾರರು ಮಾತ್ರವೇ 2022ರೊಳಗೆ ತಮ್ಮ ಮೊಬೈಲ್ಫೋನ್ ಅನ್ನು 5 ಜಿ ನೆಟ್ವರ್ಕ್ಗೆ ಅಪ್ಗ್ರೇಡ್ ಮಾಡುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ . ಆದರೆ ಶೇ.43ರಷ್ಟು ಮಂದಿ , ಹಾಲಿ 3ಜಿ/4ಜಿ ಸೇವೆಗೆ ನೀಡುವುದಕ್ಕಿಂತ ಅಧಿಕ ದರವನ್ನು ಪಾವತಿಸಿ 5ಜಿ ತಂತ್ರಜ್ಞಾನವನ್ನು ಪಡೆದುಕೊಳ್ಳಲು ತಾವು ಇಚ್ಚಿಸುವುದಿಲ್ಲವೆಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆಯಾದ ಲೋಕಲ್ಸರ್ಕಲ್ಸ್ ಈ ಸಮೀಕ್ಷೆಯನ್ನು ನಡೆಸಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದ 9965 ಮಂದಿಯಲ್ಲಿ ಶೇ.24ರಷ್ಟು ಮಂದಿ 5ಜಿ ತಂತ್ರಜ್ಞಾನವಿರುವ ನೂತನ ಮೊಬೈಲ್ ಪೋನ್ ಖರೀದಿಸುವ ಸಾಧ್ಯತೆಯಿಲ್ಲವೆಂದು ಹೇಳಿದ್ದಾರೆ. ಆದಾಗ್ಯೂ ಶೇ.20ರಷ್ಟು ಮಂದಿ ಮಾತ್ರ ತಮ್ಮಲ್ಲಿ 5ಜಿ ತಂತ್ರಜ್ಞಾನವನ್ನು ಬೆಂಬಲಿಸುವ ಮೊಬೈಲ್ ಸಾಧನವರುವುದಾಗಿ ತಿಳಿಸಿದ್ದಾರೆ. ಕೇವಲ 4 ಶೇಕಡ ಮಂದಿ ಮಾತ್ರ ಈ ವರ್ಷ 5ಜಿ ತಂತ್ರಜ್ಞಾನವಿರುವ ನೂತನ ಮೊಬೈಲ್ ಉಪಕರಣವನ್ನು ಖರೀದಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಶೇ.12ರಷ್ಟು ಮಂದಿ 2023ರ ಪೂರ್ವಾರ್ಧದೊಳಗೆ ಹಾಗೂ ಶೇ. 8ರಷ್ಟು ಮಂದಿ ಉತ್ತರಾರ್ಧದಲ್ಲಿ 5ಜಿ ಸಾಮರ್ಥ್ಯದ ಮೊಬೈಲ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದಾರೆ. ಶೇ.10ರಷ್ಟು ಮಂದಿ 2024ರಲ್ಲಿ ನೂತನ 5ಜಿ ಮೊಬೈಲ್ ಫೋನ್ ಖರೀದಿಸುವ ಬಗ್ಗೆ ಪರಿಶೀಲಿಸುತ್ತಿದ್ದಾರೆ.
5ಜಿ ತಂತ್ರಜ್ಞಾನವನ್ನು ಸಾಧ್ಯವಾದಷ್ಟು ಬೇಗನೆ ಸರಾಗವಾಗಿ ಪ್ರಸಾರವಾಗುವಂತೆ ಮಾಡಲು ಮೊಬೈಲ್ ಫೋನ್ಗಳನ್ನು ನೂತನ ತಂತ್ರಜ್ಞಾನಗಳೊAದಿಗೆ ಅಪ್ಡೇಟ್ ಮಾಡುವಂತೆ ಭಾರತ ಸರಕಾರವು ಟೆಲಿಕಾಂ ನಿರ್ವಾಹಕರು ಹಾಗೂ ಫೋನ್ ಉತ್ಪಾದಕರನ್ನು ಆಗ್ರಹಿಸುತ್ತಿದೆ. ಆದಾಗ್ಯೂ 5ಜಿ ಬಳಕೆದಾರರು ನಾನ್ಸ್ಟಾಂಡ್ ಅಲೋನ್(ಎನ್ಎಸ್ಎ)5ಜಿ ಎಂದು ಕರೆಯಲಾಗುವ ಸೇವೆಗಳನ್ನು 4ಜಿ ಟೆಲಿಕಾಂ ಮೂಲ ಸೌಕರ್ಯದ ಮೂಲಕ ಪಡೆಯಬೇಕಾಗಿರುವುದರಿಂದ ನೈಜ 5ಜಿಯ ಅನುಭವವನ್ನು ಪಡೆಯಲು ಭಾರತೀಯ ಗ್ರಾಹಕರು ಇನ್ನೂ ಕೆಲವು ಸಮಯದವರೆಗೆ ಕಾಯಬೇಕಾಗುತ್ತದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ 10,019 ಮಂದಿಯ ಪೈಕಿ ಶೇ.43ರಷ್ಟು ಮಂದಿ ಹಾಲಿ ದರಕ್ಕಿಂತ ಶೇ.10ರಷ್ಟು ಅಧಿಕ ಹಣವನ್ನು ಪಾವತಿಸಲು ಬಯಸುತ್ತಾರೆ. ಕೇವಲ 10 ಶೇಕಡ ಮಂದಿ 10 ಶೇಕಡ ಮಂದಿ 5ಜಿ ತಂತ್ರಜ್ಞಾನದ ಬಳಕೆಗಾಗಿ ಶೇ.10ರಿಂದ ಶೇ.25ಕ್ಕಿಂತಲೂ ಅಧಿಕ ಹಣವನ್ನು ಪಾವತಿಸುವ ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಶೇ.2ರಷ್ಟು ಮಂದಿ ಶೇ.25ರಿಂದ ಶೇ.50ರಷ್ಟು ಮಂದಿ ಅಧಿಕ ದರವನ್ನು ಪಾವತಿಸಲು ಸಿದ್ಧರಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು 10 ಸಾವಿರ ಮಂದಿಯ ಪೈಕಿ ಶೇ.19ರಷ್ಟು ಮಂದಿ ತಾವು ಕರೆ ಕಡಿತ ಹಾಗೂ ಸಂಪರ್ಕದ ಸಮಸ್ಯೆಗಳಲ್ಲಿ ಇಳಿಕೆಯಾಗಬೇಕೆಂದು ಬಯಸಿದ್ದಾರೆ ಹಾಗೂ ಶೇ.12ರಷ್ಟು ಮಂದಿ ದತ್ತಾಂಶ (ಡೇಟಾ)ದ ವೇಗದಲ್ಲಿ ಸುಧಾರಣೆಯನ್ನು ಕಾಣುವ ಆಶಾವಾದವನ್ನು ಹೊಂದಿದ್ದಾರೆ.ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ 5 ಶೇಕಡ ಮಂದಿ ಡೇಟಾ ನೆಟ್ವರ್ಕ್ಗಳ ಲಭ್ಯತೆಯಲ್ಲಿ ಸುಧಾರಣೆಯ ಆಶಾವಾದವನ್ನು ಹೊಂದಿದ್ದಾರೆ ಹಾಗೂ ಶೇ.3ರಷ್ಟು ಮಂದಿ ಸ್ಪಾಮ್ ಅಥವಾ ಅನಪೇಕ್ಷಿತ ಕರೆಗಳು ಹಾಗೂ ಸಂದೇಶಗಳ ಪ್ರಮಾಣದಲ್ಲಿ ಇಳಿಕೆಯಾಗಬೇಕೆಂದು ಬಯಸಿದ್ದಾರೆ.
ಭಾರತಾದ್ಯಂತದ 318 ಜಿಲ್ಲೆಗಳಲ್ಲಿರುವ ಮೊಬೈಲ್ ಸೇವೆಗಳ ಗ್ರಾಹಕರಿಂದ 29 ಸಾವಿರ ಉತ್ತರಗಳನ್ನು ಪಡೆದುಕೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 64ರಷ್ಟು ಮಂದಿ ಪುರುಷರು ಹಾಗೂ ಇತರ ಶೇ.36ರಷ್ಟು ಮಂದಿ ಮಹಿಳೆಯರು. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.47ರಷ್ಟು ಮೊದಲ ದರ್ಜೆಯ ನಗರಗಳ ನಿವಾಸಿಗಳಾದರೆ, ಶೇ.34ರಷ್ಟು ಮಂದಿ ಎರಡನೆ ದರ್ಜೆಯ ಹಾಗೂ ಶೇ.19ರಷ್ಟು ಮಂದಿ 3,4 ದರ್ಜೆಯ ನಗರಗಳು ಹಾಗೂ ಗ್ರಾಮೀಣ ಜಿಲ್ಲೆಗಳ ನಿವಾಸಿಗಳು.







