ತುರ್ತಾಗಿ ಆಗಬೇಕಾದ ಅರ್ಥವ್ಯವಸ್ಥೆಯ ಪುನಃಶ್ಚೇತನ
ಸಾಂದರ್ಭಿಕ ಚಿತ್ರ (Source: PTI)
ಹಳಿತಪ್ಪಿದ ಅರ್ಥವ್ಯವಸ್ಥೆಯನ್ನು ಮರಳಿ ಹಳಿಗೇರಿಸುವ ಕೆಲಸ ಮುಂದಿನ ಮೇ ತಿಂಗಳ ಒಳಗೇ ಆರಂಭವಾಗಬೇಕು. 2023ರ ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಯ ಗಾಳಿ ಬೀಸಲಿದೆ. ಆಗ ಆರ್ಥಿಕ ಸುಧಾರಣೆಗಳು ನೇಪಥ್ಯಕ್ಕೆ ಸರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಪ್ರಯತ್ನ ಈಗಿಂದೀಗಲೇ ಪ್ರಾರಂಭವಾಗಬೇಕಾದ ಅಗತ್ಯವನ್ನು ದೇಶದ ರಾಜಕೀಯ ಧುರೀಣರು ಗಮನಿಸಬೇಕು.
ಕೇಂದ್ರ ಸರಕಾರವು ಈ ಸೆಪ್ಟಂಬರ್ನಲ್ಲಿ ಹೊರತಂದ ವರದಿಯ ಪ್ರಕಾರ 2022 ಎಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಭಾರತದ ಸ್ಥೂಲ ದೇಶೀಯ ಉತ್ಪನ್ನ (ಜಿಡಿಪಿ) ಶೇ.13.5ರಷ್ಟು ಹೆಚ್ಚಿದೆ. ಈ ಮಾನಕದ ಆಧಾರದಲ್ಲಿ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ದೇಶವಾಗಿರುವುದಲ್ಲದೆ, ಇಂಗ್ಲೆಂಡನ್ನು ಹಿಮ್ಮೆಟ್ಟಿಸಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಇದೇ ಸಂದರ್ಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ಆರ್ಥಿಕ ಸಂಶೋಧನಾ ವಿಭಾಗವೂ ಈ ಸಾಧನೆಯ ಬಗ್ಗೆ ಉಲ್ಲೇಖಿಸುತ್ತಾ 2014ರಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 5ಕ್ಕೆ ಏರಿದೆ; 2027ಕ್ಕೆ 4ನೇ ಸ್ಥಾನಕ್ಕೆ ಏರಿ, 2029ಕ್ಕೆ 3ನೆಯ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ. ಈ ಬೆಳವಣಿಗೆ ನಮ್ಮ ದೇಶಕ್ಕೆ ಹೆಮ್ಮೆ ತರುವ ವಿಷಯ. ಈ ಸುದ್ದಿಯ ಜೊತೆಗೆ ದೇಶದ ಪ್ರಸಕ್ತ ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರಗತಿಯ ಕುರಿತು ಹೇಳಿಕೊಳ್ಳುವುದು ಅಪ್ರಬುದ್ಧವೆನಿಸುತ್ತದೆ. ಒಂದು ವರ್ಷದ ಹಿಂದೆ, ಅಂದರೆ 2020-21ರಲ್ಲಿ ಕೋವಿಡ್ ಸಾಂಕ್ರಾಮಿಕದ ದಾಳಿಯಿಂದಾಗಿ ಅರ್ಥವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿತ್ತು; ಆ ವರ್ಷ ಜಿಡಿಪಿಯು ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿತು. 2021-22ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಎರಡನೆಯ ಅಲೆಯಿಂದ ಮತ್ತಷ್ಟು ಹಾನಿಯಾಯಿತು.
ಕಳೆದ ಅಕ್ಟೋಬರ್ನಿಂದ ಚೇತರಿಸಲು ಆರಂಭವಾಯಿತು. ಆದರೆ ಹಿಂದಿನ ವರ್ಷಗಳ ಆರ್ಥಿಕ ಹಿಂಜರಿತದಿಂದಾಗಿ 2019-22ರ ಅವಧಿಯಲ್ಲಿ ದೇಶದ ಜಿಡಿಪಿಯಲ್ಲಿ ಕೇವಲ ಶೇ.3ರ ಹೆಚ್ಚಳವಾಗಿತ್ತಷ್ಟೆ. ಋಣಾತ್ಮಕವಾಗಿದ್ದ ಜಿಡಿಪಿಯು, ಜೂನ್ 2022ರ ತ್ರೈಮಾಸಿಕದಲ್ಲಿ ಧನಾತ್ಮಕವಾಗಿ ಹೆಚ್ಚಾದಾಗ ಶೇಕಡಾವಾರು ದೊಡ್ಡದಾಗಿ ಕಾಣುವುದು ಸಹಜ. ಈ ಕಾರಣಕ್ಕಾಗಿ ಜೂನ್ ತ್ರೈಮಾಸಿಕದ ಪ್ರಗತಿಯ ದರವು ವಿಶ್ವಾಸ ಹುಟ್ಟಿಸುವ ಒಂದು ಮಾನದಂಡವಾಗುವುದಿಲ್ಲ. ಇದರ ಬೆನ್ನಿಗೇ ಅಕ್ಟೋಬರ್ ಪ್ರಾರಂಭದಲ್ಲಿ ಪ್ರಕಟಿಸಿದ ತನ್ನ ವರದಿಯಲ್ಲಿ ವಿಶ್ವ ಬ್ಯಾಂಕು ಭಾರತದ ಜಿಡಿಪಿಯ ವೃದ್ಧಿ 2022-23ರಲ್ಲಿ ಶೇ. 6.5ಕ್ಕೆ ಇಳಿಯಲಿದೆ ಎಂದು ಹೇಳಿದೆ; ಇದಕ್ಕೆ ಮೊದಲು ಎಪ್ರಿಲ್ ತಿಂಗಳಿನಲ್ಲಿ ಈ ಬೆಳವಣಿಗೆ ಶೇ. 8.7ರಿಂದ ಶೇ. 8ಕ್ಕೆ, ಜೂನ್ನಲ್ಲಿ ಶೇ. 7.5ಕ್ಕೆ ಇಳಿಯಬಹುದೆಂಬ ಮುನ್ಸೂಚನೆಯನ್ನು ನೀಡಿತ್ತು. ಅಂದರೆ ಎಪ್ರಿಲ್ ಮತ್ತು ಸೆಪ್ಟಂಬರ್ನ ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿಯ ಗತಿಯನ್ನು ವಿಶ್ಲೇಷಿಸಿ ಮತ್ತು ದೇಶದ ಮುಂದಿರುವ ಸವಾಲುಗಳನ್ನು ಗಮನಿಸಿ ಶೇ. 8.7 ಅಂದಾಜಿನಿಂದ ಶೇ.6.5ರಷ್ಟು ಮಾತ್ರ ಹೆಚ್ಚಬಹುದು ಎಂದು ಉಲ್ಲೇಖಿಸಿದೆ. ಈ ಆರು ತಿಂಗಳ ಅವಧಿಯಲ್ಲಿ ಮೂರು ಬಾರಿ ಅಂದಾಜು ವೃದ್ಧಿಯನ್ನು ಪರಿಷ್ಕರಿಸುವ ಮೂಲಕ ವಿಶ್ವಬ್ಯಾಂಕು ದೇಶದ ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಬಗ್ಗೆ ಸಂಶಯವನ್ನು ಎಬ್ಬಿಸಿದೆ. ಹೋದ ವಾರ ಅಂತರ್ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಭಾರತದ ಜಿಡಿಪಿ ಕುಂಠಿತವಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದೆ. ಅಂತರ್ರಾಷ್ಟ್ರೀಯ ಹೂಡಿಕೆ ಸಲಹಾ ಸಂಸ್ಥೆಯಾದ ‘ಮೂಡೀಸ್’, ಸೆಪ್ಟಂಬರ್ನ ಆದಿಯಲ್ಲಿ ಭಾರತದ ಬೆಳವಣಿಗೆ 2021ರಲ್ಲಿ ಶೇ. 8.3 ಇದ್ದುದು 2022 ರಲ್ಲಿ ಶೇ. 7.7ಕ್ಕೆ ಕುಗ್ಗಿ 2023ರಲ್ಲಿ ಶೇ. 5.2ಕ್ಕೆ ಇಳಿಯಬಹುದು ಎಂದು ಅಂದಾಜಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೂಡ ಈ ಎಪ್ರಿಲ್ನಲ್ಲಿ ಪ್ರಗತಿಯ ದರವನ್ನು ಶೇ. 7.8ರಿಂದ ಶೇ. 7.2ಕ್ಕೆ ಇಳಿಸಿತ್ತು, ಹೋದ ತಿಂಗಳು ಅದನ್ನು ಮತ್ತೆ ಶೇ. 7ಕ್ಕೆ ಕುಗ್ಗಿಸಿತು.
ಇವುಗಳ ಒಟ್ಟು ಸಾರಾಂಶ: ಭಾರತದ ಆರ್ಥಿಕತೆಯು ದ್ರುತಗತಿಯಲ್ಲಿ ಪ್ರಗತಿ ಹೊಂದುವ ಲಕ್ಷಣಗಳಿಲ್ಲ. ಈ ಪರಿಸ್ಥಿತಿ ಆತಂಕಕ್ಕೆ ಎಡೆ ಮಾಡಿ ಕೊಡುತ್ತದೆ. ಆತಂಕಕಾರಿ ಚಿಹ್ನೆಗಳು: ಕೋವಿಡ್ ಸಾಂಕ್ರಾಮಿಕದ ಹಾವಳಿಯ ಮೊದಲೇ ಭಾರತದ ಅರ್ಥವ್ಯವಸ್ಥೆ ಅನೇಕ ತಜ್ಞರ ಪ್ರಕಾರ ಹಳಿ ತಪ್ಪಿತ್ತು; ಸಾಂಕ್ರಾಮಿಕ ದೇಶವನ್ನು ಅಪ್ಪಳಿಸಿದಾಗ ಆರ್ಥಿಕ ಕುಸಿತ ತೀವ್ರವಾಯಿತು. ಅಧಿಕೃತ ಹೇಳಿಕೆಗಳ ಮತ್ತು ವರದಿಗಳ ಹೊರತಾಗಿಯೂ ಅರ್ಥವ್ಯವಸ್ಥೆ ಇನ್ನೂ ಹಳಿಗೆ ಏರಿಲ್ಲ ಎಂಬುದು ಕೆಲವು ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ. ಇವುಗಳಲ್ಲಿ ಅತ್ಯಂತ ಕಳವಳಕಾರಿ ಅಂಶಗಳು ಹೀಗಿವೆ:
1. ಏರುತ್ತಿರುವ ಚಿಲ್ಲರೆ ಸಾಮಾನುಗಳ ಬೆಲೆಗಳು-‘ಚಿಲ್ಲರೆ ಹಣದುಬ್ಬರ’
2. ಕಚ್ಚಾ ತೈಲಗಳ ಬೆಲೆಗಳ ಹೆಚ್ಚಳ
3. ಹಣದುಬ್ಬರವನ್ನು ಹತೋಟಿಗೆ ತರಲೆಂದು ಆರ್ಬಿಐ ಅನುಸರಿಸುತ್ತಿರುವ ಬಿಗಿ ಹಣಕಾಸು ನೀತಿ (ಬಡ್ಡಿದರದ ಹೆಚ್ಚಳದ ಮೂಲಕ)
4. ಹೊಸ ಉದ್ದಿಮೆಗಳ ಸ್ಥಾಪನೆಯಲ್ಲಿ ನಿರಾಸಕ್ತಿ
5. ಉದ್ಯೋಗ ನಷ್ಟ ಮತ್ತು ಹೊಸ ಉದ್ಯೋಗಗಳ ಸೃಷ್ಟಿಯಾಗದ ಪರಿಸ್ಥಿತಿ
6. ಡಾಲರಿನ ಎದುರು ನಿರಂತರವಾಗಿ ಕುಸಿಯುತ್ತಿರುವ ರೂಪಾಯಿಯ ಮೌಲ್ಯ 7. ಕರಗುತ್ತಿರುವ ವಿದೇಶಿವಿನಿಮಯದ ಮೀಸಲು
ಅಕ್ಟೋಬರ್ ತಿಂಗಳ ಆರಂಭದಲ್ಲಿ ಡಾಲರ್- ರೂಪಾಯಿ ವಿನಿಮಯ ದರ 80ನ್ನು ದಾಟಿ 82ಕ್ಕೆ ತಲಪಿದೆ (1ಡಾಲರ್=82 ರೂಪಾಯಿ) ರೂಪಾಯಿಯ ಅಪಮೌಲ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಆರ್ಬಿಐ ತನ್ನಲ್ಲಿರುವ ಡಾಲರ್ ಮೀಸಲು ನಿಧಿಯನ್ನು ಮಾರುಕಟ್ಟೆಗೆ ಪೂರೈಸುತ್ತಾ ಇದೆ; ಇದರಿಂದಾಗಿ ಹೋದ 13 ತಿಂಗಳುಗಳಲ್ಲಿ ಭಾರತದ ವಿದೇಶಿ ವಿನಿಮಯದ ಸಂಗ್ರಹ 110 ಬಿಲಿಯ ಡಾಲರಿನಷ್ಟು (1 ಬಿಲಿಯ=100 ಕೋಟಿ ರೂ.) ಕುಸಿದಿದೆ; ಅಂದರೆ ಸೆಪ್ಟಂಬರ್ 2021ರಲ್ಲಿ 642 ಬಿಲಿಯ ಡಾಲರ್ ಇದ್ದ ವಿದೇಶಿ ವಿನಿಮಯದ ಸಂಗ್ರಹವು 2022 ಸೆಪ್ಟಂಬರ್ನ ಕೊನೆಗೆ 532 ಬಿಲಿಯ ಡಾಲರಿಗೆ ಇಳಿದಿದೆ. ಇವೂ ಅಲ್ಲದೆ ಮೇ ತಿಂಗಳಿನಿಂದ ದೇಶದ ರಫ್ತಿನ ಮೌಲ್ಯಕ್ಕಿಂತ ಆಮದಿನ ಮೌಲ್ಯ ಹೆಚ್ಚಿ ವಿದೇಶಿ ವ್ಯಾಪಾರದಲ್ಲಿ ಏರುಪೇರು ಉಂಟಾಗಿದೆ. ಈ ಹೊಸ ಬೆಳವಣಿಗೆಗಳು ಆತಂಕವನ್ನು ಉಂಟುಮಾಡುತ್ತವೆ.
ಚಿಲ್ಲರೆ ಸರಕು ಮತ್ತು ಸೇವೆಗಳ ಬೆಲೆಗಳ ಏರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಚಿಲ್ಲರೆ ಹಣದುಬ್ಬರವು ಆರ್ಬಿಐಯ ಲಕ್ಷ್ಮಣ ರೇಖೆಯಾದ ಶೇ. 6ನ್ನು ದಾಟಿ, ಸೆಪ್ಟಂಬರ್ನ ಕೊನೆಗೆ ಶೇ. 7.40ಕ್ಕೆ ಏರಿದೆ. ದೈನಂದಿನ ಬಳಕೆಯ ಸರಕುಗಳಾದ ಅಡುಗೆ ಅನಿಲ, ವಿದ್ಯುತ್, ತರಕಾರಿ, ಇಂಧನ ಮತ್ತು ಆಹಾರ ಧಾನ್ಯಗಳ ಬೆಲೆಗಳು ಏರುತ್ತಲೇ ಇವೆ: ತಳಮಟ್ಟ ಹಾಗೂ ಕೆಳಮಧ್ಯಮವರ್ಗದ ನಾಗರಿಕರು ತಮ್ಮ ಸಂಪಾದನೆಯ ಬಹುಪಾಲನ್ನು ಇವುಗಳನ್ನು ಖರೀದಿಸಲೇ ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲದರ ಜೊತೆಗೆ ರೈತರ ಸಮಸ್ಯೆಗಳೂ ಉಲ್ಬಣಿಸುತ್ತಿವೆ. ಉತ್ಪಾದನಾ ವೆಚ್ಚಗಳ ಹೆಚ್ಚಳ, ಬೆಂಬಲ ಬೆಲೆಯ ಬಗ್ಗೆ ಅನಿಶ್ಚಿತತೆ, ಕೃಷ್ಯುತ್ಪನ್ನಗಳ ಆಮದು/ರಫ್ತು ನೀತಿಯಲ್ಲಿ ಕಾಣುವ ದ್ವಂದ್ವ ಧೋರಣೆಗಳು, ಸಾಲಮರುಪಾವತಿಗೆ ಬ್ಯಾಂಕುಗಳಿಂದ ಬರುತ್ತಿರುವ ಒತ್ತಡಗಳು, ಈ ವರ್ಷದ ಅಕಾಲ ಮಳೆ ಇವೇ ಮುಂತಾದ ಕಾರಣಗಳಿಂದಾಗಿ ಕೃಷಿ ಕ್ಷೇತ್ರದ ಉತ್ಪಾದನೆಯಲ್ಲಿ ಹಿಂಜರಿತದ ಸಾಧ್ಯತೆಯು ಇದೆ. ಅಂತರ್ರಾಷ್ಟ್ರೀಯ ಮಟ್ಟದ ಬೆಳವಣಿಗೆ ಗಳೂ ನಮ್ಮ ಆರ್ಥಿಕತೆಯ ಮೇಲೆ ಪರಿಣಾಮವನ್ನು ಬೀರಿವೆ. 2021ರ ಕೊನೆಗೆ ಆರಂಭವಾದ ರಶ್ಯ-ಉಕ್ರೇನ್ ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ ವ್ಯಾಪಾರ ನಿರ್ಬಂಧಗಳು, ಅವುಗಳಿಂದಾಗಿ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಆದ ಹೊಡೆತ ಮತ್ತು ಆರ್ಥಿಕ ಹಿಂಜರಿತಗಳ ಬಿಸಿ ಭಾರತಕ್ಕೂ ತಲುಪಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳೂ ಕಚ್ಚಾ ತೈಲ ಉತ್ಪಾದನೆಯ ಮೇಲೆ ಸ್ವಯಂಪ್ರೇರಿತ ಮಿತಿಯನ್ನು ಹೇರಿವೆ. ಆಮದು ಮಾಡಲಿರುವ ತೈಲೋತ್ಪನ್ನಗಳ ಬೆಲೆ ಮತ್ತೆ ಏರಿ ಎಲ್ಲಾ ಸರಕುಗಳು ಮತ್ತು ನಿತ್ಯೋಪಯೋಗದ ವಸ್ತು ಮತ್ತು ಸೇವೆಗಳ ಬೆಲೆಗಳು ಗಗನಮುಖಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಚೇತರಿಕೆ ಕಾಣದ ಉದ್ದಿಮೆಗಳು:
2020-21ರಲ್ಲಿ ಕೋವಿಡ್ ಸಾಂಕ್ರಾಮಿಕವು ಭಾರತದ ಅರ್ಥವ್ಯವಸ್ಥೆಗೆ ಮಾರಕ ಹೊಡೆತವನ್ನು ನೀಡಿತ್ತು ಎಂಬುದು ನಿರ್ವಿವಾದ. 2020ರ ಮಧ್ಯಭಾಗದಲ್ಲಿ ದೇಶದ ಆರ್ಥಿಕತೆಯನ್ನು ಸ್ವಾವಲಂಬಿಯಾಗಿಸುವ ಉದ್ದೇಶದಿಂದ ‘ಆತ್ಮನಿರ್ಭರ ಭಾರತ’ವೆಂಬ ಹೆಸರಿನಲ್ಲಿ ಅನೇಕ ರೀತಿಯ ಸಹಾಯಗಳನ್ನು ಉದ್ದಿಮೆಗಳಿಗೆ ನೀಡುವ ಘೋಷಣೆಯನ್ನು ಮಾಡಲಾಯಿತು. ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡಲು ‘ವೋಕಲ್ ಫಾರ್ ಲೋಕಲ್’ ಎಂಬ ನೀತಿಯನ್ನೂ ಪ್ರಚಾರಮಾಡಲಾಯಿತು. ಬ್ಯಾಂಕುಗಳಿಂದ ಪಡಕೊಂಡ ಸಾಲಗಳ ಮರುಪಾವತಿಯ ಕಂತುಗಳನ್ನು ಮುಂದೂಡಲಾಯಿತು. ಆದರೆ, ಈ ಯೋಜನೆಗಳು ದೀರ್ಘಕಾಲೀನ ಸುಧಾರಣೆಗಳನ್ನು ಒಳಗೊಂಡಿರಲಿಲ್ಲ. ಇದರಿಂದಾಗಿ ಹೊಸ ಉದ್ದಿಮೆಗಳು ಹುಟ್ಟಲಿಲ್ಲ ಮತ್ತು ಹಿಂಜರಿತಕ್ಕೆ ಬಲಿಯಾದ ಉದ್ದಿಮೆಗಳಲ್ಲಿ ಹೊಸ ಹೂಡಿಕೆಗಳು ಆಗಲಿಲ್ಲ. ಇದರ ಪರಿಣಾಮವಾಗಿ ಹೊಸ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳ ಕಾಣಲಿಲ್ಲ. ಮಾತ್ರವಲ್ಲ ಬೇಡಿಕೆಯಲ್ಲಿ ಹೆಚ್ಚಳವಾಗದೆ ಇದ್ದು ಉತ್ಪಾದನಾ ಚಟುವಟಿಕೆಗಳು ಚೇತರಿಸಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಈಗ ಬೆಲೆ ಏರಿಕೆಯಿಂದಾಗಿ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿಲ್ಲ-ಬೇಡಿಕೆ ಇದ್ದರೂ ಅದು ಆಹಾರ ಸಾಮಗ್ರಿ ಮತ್ತು ಅಗತ್ಯದ ವಸ್ತುಗಳಿಗೆ ಮಾತ್ರ ಸೀಮಿತವಾಗಿ ಉದ್ದಿಮೆಗಳು ತಮ್ಮ ಉತ್ಪಾದನಾ ಕ್ಷಮತೆಗೆ ಅನುಗುಣವಾಗಿ ಸರಕುಗಳನ್ನು ಉತ್ಪಾದಿಸುತ್ತಿಲ್ಲ.
ಒಟ್ಟಿನಲ್ಲಿ ಈ ಬೆಳವಣಿಗೆಗಳು ನಮ್ಮ ಅರ್ಥನೀತಿಯ ಔಚಿತ್ಯವನ್ನೇ ಪ್ರಶ್ನಿಸಬೇಕಾದ ಸನ್ನಿವೇಶವನ್ನು ಸೃಷ್ಟಿಸಿವೆ.
ಹೊಸ ದಾರಿಗಳ ಅಗತ್ಯ:
ಸದ್ಯದ ಅರ್ಥವ್ಯವಸ್ಥೆಯಲ್ಲಿ ಸಂಭವಿಸುತ್ತಿರುವ ಆತಂಕಕಾರಿ ವಿದ್ಯಮಾನಗಳು ದೇಶದ ಆರ್ಥಿಕತೆಯ ಸುಧಾರಣೆಗೆ ತುರ್ತು ಕ್ರಮಗಳ ಅಗತ್ಯವನ್ನು ಒತ್ತಿ ಹೇಳುತ್ತವೆ. ಕೆಲವು ಅಗತ್ಯದ ದಾರಿಗಳು ಹೀಗಿವೆ:
1. ಜನರ ಬೇಡಿಕೆಗಳನ್ನು ಹೆಚ್ಚಿಸುವ ಕ್ರಮಗಳು
2. ಉದ್ದಿಮೆಗಳು ತಮ್ಮ ಸ್ಥಾಪಿತ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಮತ್ತು ಸರಕುಗಳನ್ನು ಉತ್ಪಾದಿಸಲು/ಪೂರೈಸಲು ಪ್ರೋತ್ಸಾಹ
3. ಹೊಸ ಹೂಡಿಕೆಗೆ ಉತ್ತೇಜನೆ
4. ಉದ್ಯೋಗ ಸೃಷ್ಟಿಗೆ ಅತೀ ಅಗತ್ಯವಾದ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ (ಎಂಎಸ್ಎಂಇ)ಗಳಿಗೆ ವಿಭಿನ್ನ ರೀತಿಯ ಪ್ರೋತ್ಸಾಹ
ಈ ಎಲ್ಲ ಕ್ರಮಗಳ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಸಾಮರಸ್ಯಕ್ಕೆ ಆದ್ಯತೆ ನೀಡಬೇಕು. ಸಮಾಜದಲ್ಲಿ ವೈಷಮ್ಯಗಳು ಹೆಚ್ಚಿದಂತೆ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗುತ್ತದೆ. ದೀರ್ಘಾವಧಿಯಲ್ಲಿ ಇದರ ಪರಿಣಾಮ ತೀವ್ರವಾಗುತ್ತದೆ.
ಹಳಿತಪ್ಪಿದ ಅರ್ಥವ್ಯವಸ್ಥೆಯನ್ನು ಮರಳಿ ಹಳಿಗೇರಿಸುವ ಕೆಲಸ ಮುಂದಿನ ಮೇ ತಿಂಗಳ ಒಳಗೇ ಆರಂಭವಾಗಬೇಕು. 2023ರ ಮೇ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆಯ ಗಾಳಿ ಬೀಸಲಿದೆ. ಆಗ ಆರ್ಥಿಕ ಸುಧಾರಣೆಗಳು ನೇಪಥ್ಯಕ್ಕೆ ಸರಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಪ್ರಯತ್ನ ಈಗಿಂದೀಗಲೇ ಪ್ರಾರಂಭವಾಗಬೇಕಾದ ಅಗತ್ಯವನ್ನು ದೇಶದ ರಾಜಕೀಯ ಧುರೀಣರು ಗಮನಿಸಬೇಕು.