ಸಂಪುಟ ವಿಸ್ತರಣೆ | ಶೀಘ್ರವೇ ದಿಲ್ಲಿ ಭೇಟಿ: ಮುಖ್ಯಮಂತ್ರಿ ಬೊಮ್ಮಾಯಿ

ಬೆಳಗಾವಿ, ಅ. 15: ‘ಜನಸಂಕಲ್ಪ ಯಾತ್ರೆಯ ಸಂದರ್ಭದಲ್ಲಿಯೇ ಹೊಸದಿಲ್ಲಿಗೆ ಭೇಟಿ ನೀಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ನಿರ್ಣಯ ಕೈಗೊಂಡಾಗ ಎಲ್ಲರಿಗೂ ತಿಳಿಸಲಾಗುವುದು. ಬೆಳಗಾವಿ ಜಿಲ್ಲೆಗೆ ಶುಭ ಸುದ್ದಿ ಸಿಗಲಿದೆಯೆ ಎಂಬ ಬಗ್ಗೆ ಕಾದುನೋಡಿ' ಎಂದು ಪ್ರತಿಕ್ರಿಯೆ ನೀಡಿದರು.
‘ಕೊಲ್ಲಾಪುರದ ಕನೇರಿ ಮಠದಲ್ಲಿ ಕನ್ನಡ ಭವನ ಕಟ್ಟಲು ಶಿವಸೇನೆಯವರು ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಯಿಸಿದ ಅವರು, ‘ಈಗಾಗಲೇ ಮಹಾರಾಷ್ಟ್ರದಲ್ಲಿ ಹತ್ತು ಹಲವಾರು ಸಂಘಗಳ ಕನ್ನಡ ಭವನಗಳು ಇವೆ.ಹಲವಾರು ದೇವಸ್ಥಾನಗಳು, ಯಾತ್ರಿನಿವಾಸಗಳೂ ಇವೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಭಾಷೆಗಳು ಅಡಚಣೆ ಆಗಬಾರದುಎಂಬುದು ನನ್ನ ಅನಿಸಿಕೆ ಎಂದರು.
Next Story





