ಗಾಂಧಿಯನ್ನು ಅಳಿಸಿ ಹಾಕಲು ನಿರಂತರ ಪ್ರಯತ್ನ: ಡಾ.ಜಯಪ್ರಕಾಶ್ ಶೆಟ್ಟಿ

ಉಡುಪಿ, ಅ.15: ಇಂದು ಗಾಂಧಿಯನ್ನು ಅಳಿಸಿ ಹಾಕುವ ಪ್ರಯತ್ನ ಮತ್ತೆ ಮತ್ತೆ ನಡೆಯುತ್ತಿದೆ. ಆದರೆ ಗಾಂಧಿ ಕಲ್ಲಿನ ಮೇಲಿನ ಬರಹ. ಅವರನ್ನು ಅಳಿಸುವ ಯಾವುದೇ ಪ್ರಯತ್ನ ಕೂಡ ಸಫಲವಾಗುವುದಿಲ್ಲ. ಅದರ ಬದಲು ಅವರ ಹೆಸರು ಮತ್ತೆ ಮತ್ತೆ ಉಜ್ವಲ ಮತ್ತು ನಿಶ್ಚಲಗೊಳ್ಳುತ್ತದೆ ಎಂಬುದು ರುಜುವಾತು ಆಗುತ್ತಿದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಜಯಪ್ರಕಾಶ ಶೆಟ್ಟಿ ಎಚ್. ಹೇಳಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಶನಿವಾರ ಉಡುಪಿ ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ನಡೆದ ಡಿ.ಎಸ್. ನಾಗಭೂಷಣ ಅವರ ಗಾಂಧಿ ಕಥನ: ಒಂದು ಮುಖಾಮುಖಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡುತಿದ್ದರು.
ಅಧಿಕಾರದಿಂದ ದೂರ ಇರುವವರ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂಬುದಕ್ಕೆ ಗಾಂಧಿ ಪ್ರಮುಖ ಉದಾಹರಣೆ. ಜನ ಇನ್ನು ಕೂಡ ಸತ್ಯವನ್ನು ಪ್ರೀತಿಸುತ್ತಾರೆ. ಆದರೆ ವರ್ತಮಾನದ ಕಾಲ ಸತ್ಯಕ್ಕೆ ಬೆನ್ನು ಹಾಕಿಕೊಂಡಿದ್ದೇವೆ ಎಂಬುದನ್ನು ಕೇಳುವಾಗ ಭಯವಾಗುತ್ತದೆ. ಧರ್ಮ ಎಂಬುದು ಬಲವಾಗಿ ನೋಡದೆ ಪ್ರೀತಿಯಿಂದ ಗಮನಿಸಿದ ಗಾಂಧಿ, ಧರ್ಮದೊಳಗೆ ಬಲಪ್ರಯೋಗ ಮಾಡಿದರೆ ಅದು ಹಿಂಸೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರು ಎಂದರು.
ಗಾಂಧಿ ಹೊಗಳಿಕೆಗಿಂತ ವಿಮರ್ಶೆ, ಟೀಕೆಗಳ ಮಾತುಗಳನ್ನು ಹೆಚ್ಚು ಕೇಳಿ ಸುತ್ತಿದ್ದರು. ವಿಮರ್ಶೆ ಹಾಗೂ ಪ್ರಶ್ನೆಗೆ ಸದಾ ಒಗ್ಗಿಕೊಂಡವರು ಗಾಂಧಿ. ಗಾಂಧಿ ಪರಮ ಧಾರ್ಮೀಯಕರು. ಗಾಂಧೀಜಿಗೆ ಸತ್ಯ, ಬದುಕು, ದೇವರು ಬೇರೆಬೇರೆ ಅಲ್ಲ. ನೈತಿಕ ನೆಲೆಗಟ್ಟಿನ ಮೇಲೆ ರಾಜಕಾರಣ ಕಟ್ಟಿವರು. ಸಂತರಾಗಿ ರಾಜಕಾರಣಿ ಯಾಗಿದ್ದವರು ಮತ್ತು ರಾಜಕಾರಣಿಯಾಗಿ ಸಂತರಾಗಿದ್ದವರು. ಗಾಂಧಿಗೆ ಯಾವುದೇ ಧರ್ಮ ಕೂಡ ಗೋಡೆಯಾಗಿ ಕಂಡಿರಲಿಲ್ಲ ಎಂದು ಅವರು ತಿಳಿಸಿದರು.
ಮಾಧ್ಯಮ ಕಟ್ಟಿಕೊಡುವ ಪುರಾಣದ ಸಾಹಸದ ಕಥೆಗೂ ಗಾಂಧಿ ಬದುಕಿನ ಸಾಹಸದ ಕಥೆಗೂ ಸಾಕಷ್ಟು ವ್ಯಾತ್ಯಾಸ ಇದೆ. ಸಾಮಾನ್ಯ ಸಂಗತಿಗಳ ಒಳವನ್ನು ತೋರಿಸಿದ ಬದುಕೇ ಗಾಂಧೀಯ ನಿಜವಾದ ಬದುಕು ಆಗಿದೆ. ಗಾಂಧಿ ಸತ್ಯದ ಜೊತೆ ಮಾತನಾಡಲು ಮತ್ತು ಅನುಸಂಧಾನ ಮಾಡಲು ಯಾವುದೇ ರೀತಿಯ ಭಯ ಪಡುತ್ತಿರಲಿಲ್ಲ. ಗಾಂಧಿ ಮತ್ತು ಬುದ್ಧನ ಸತ್ಯದ ಜೊತೆಗಿನ ಅನುಸಂಧಾನಕ್ಕೆ ಹೆಚ್ಚು ಸಾಮತ್ಯ ಇಲ್ಲ ಎಂದು ಅವರು ಹೇಳಿದರು.
ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು.







