ಅ.23ರಂದು ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

ಉಡುಪಿ, ಅ.15: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಮತ್ತು ಬ್ರಹ್ಮಾವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಇವರ ಸಹಭಾಗಿತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 10ರಿಂದ 18ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ‘ದೀಪಿಕಾ- 2022’ ಸಾಂಪ್ರ ದಾಯಿಕ ಗೂಡುದೀಪ ಸ್ಪರ್ಧೆಯನ್ನು ಅ.23ರಂದು ಉಡುಪಿ ಮತ್ತು ಬ್ರಹ್ಮಾವರ ದಲ್ಲಿ ಆಯೋಜಿಸಲಾಗಿದೆ.
ಉಡುಪಿ ಪತ್ರಿಕಾ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಡುಪಿ ತಾಲೂಕು ಮಟ್ಟದ ಸ್ಪರ್ಧೆ ಬೆಳಿಗ್ಗೆ 10 ಗಂಟೆಗೆ ಬನ್ನಂಜೆ ಶ್ರೀನಾರಾಯಣಗುರು ಶಿವಗಿರಿ ಸಭಾಭವನ ದಲ್ಲಿ ಸ್ಪರ್ಧೆ ಉದ್ಘಾಟನೆಗೊಳ್ಳಲಿದ್ದು, 11 ಗಂಟೆಗೆ ಗೂಡುದೀಪ ಸ್ಪರ್ಧೆಯು ಪ್ರಾರಂಭವಾಗಲಿದೆ. ಅದೇ ದಿನ ಮಧ್ಯಾಹ್ನ 3ಗಂಟೆಗೆ ಬ್ರಹ್ಮಾವರ ಬಂಟರ ಸಭಾಭವನ ದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಸ್ಪರ್ಧೆ ನಡೆಯಲಿದ್ದು ಸಂಜೆ 5ಗಂಟೆಗೆ ಸಮಾರೋಪ ಸಮಾರಂಭವು ಅಲ್ಲೆ ಜರಗಲಿದೆ ಎಂದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದ ಸ್ಪರ್ಧಾರ್ಥಿಗಳು ತಾವು ತಯಾರಿಸಿದ ಗೂಡುದೀಪ ಗಳೊಂದಿಗೆ ಸ್ಪರ್ಧೆ ಆರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಸಭಾಭವನದಲ್ಲಿ ಹಾಜರಿರಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕವಾಗಿ ಪ್ರಥಮ-10,000 ರೂ., ದ್ವಿತೀಯ- 5000 ರೂ., ತೃತೀಯ- 3000ರೂ. ಮತ್ತು 10 ಪ್ರೋತ್ಸಾಹಕರ ಬಹುಮಾನಗಳನ್ನು ಹಾಗೂ ಭಾಗವಹಿಸಿ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಉಭಯ ತಾಲೂಕಿನ ಅಭ್ಯರ್ಥಿಗಳು ತಮ್ಮ ಹೆಸರನ್ನು ಅ.20ರ ಸಂಜೆ 6ಗಂಟೆಯ ಒಳಗಾಗಿ ಉಡುಪಿ ತಾಲೂಕು- 8150980511, ಬ್ರಹ್ಮಾವರ ತಾಲೂಕು- 9900136957 ವಾಟ್ಸಾಪ್ ನಂಬರ್‌ಗೆ ಮೆಸೇಜ್ ಮಾಡಿ ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರ ಗಳಿಗೆ ಮೀನಾಕ್ಷಿ ಮಾಧವ ಬನ್ನಂಜೆ ಉಡುಪಿ-9341149820, ಡಾ.ಸುನೀತಾ ಶೆಟ್ಟಿ ಬ್ರಹ್ಮಾವರ- 9972992666 ಇವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ್, ಗಾಯತ್ರಿ, ಸುಕನ್ಯಾ ಪೂಜಾರಿ, ಡಾ.ಸುನೀತಾ ಶೆಟ್ಟಿ ಉಪಸ್ಥಿತರಿದ್ದರು.







