ಅ.16 ರಿಂದ ಶಾಮಿಯಾನ ಸಂಘದ ರಾಜ್ಯಮಟ್ಟದ 2ನೇ ಮಹಾ ಅಧಿವೇಶನ
ಉಡುಪಿ, ಅ.15 : ಕರ್ನಾಟಕ ರಾಜ್ಯ ಶಾಮಿಯಾನ, ಡಕೋರೇಶನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ಗಂಗಾವತಿ, ಆಲ್ ಇಂಡಿಯಾ ಟೆಂಟ್ ಆ್ಯಂಡ್ ಡೆಕೋರೇಟರ್ಸ್ ವೆಲ್ ಫೇರ್ ಅಸೋಸಿಯೇಶನ್ ನವದೆಹಲಿ, ಹಾಗೂ ಧ್ವನಿ ಬೆಳಕು ಸಂಯೋಜಕರ ಸಂಘಟನೆ ಉಡುಪಿ ಜಿಲ್ಲೆ ಇದರ ಸಂಯುಕ್ತ ಅಶ್ರಯದಲ್ಲಿ ರಾಜ್ಯಮಟ್ಟದ 2ನೇ ಮಹಾಅಧಿವೇಶನ ಹಾಗೂ ಉಡುಪಿ ಜಿಲ್ಲಾ ದಶಮಾನೋತ್ಸವದ ಉಡುಪಿ ವೈಭವ ಕಾರ್ಯಕ್ರಮ ಅ.16 ರಿಂದ ಅ.18 ರ ವರೆಗೆ ಉಡುಪಿಯ ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಸಿ.ಹಿರೇಮಠ ಈ ಕುರಿತು ಮಾಹಿತಿ ನೀಡಿದರು. ಅ.16 ರಂದು ಬೆಳಗ್ಗೆ 9:30ಕ್ಕೆ ವಸ್ತುಪ್ರದರ್ಶನದ ಮಾರಾಟ ಮಳಿಗೆ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 10:30ಕ್ಕೆ ಸಭಾ ಕಾರ್ಯ ಕ್ರಮವನ್ನು ಉಡುಪಿ ಎಸ್ಪಿಹಾಕೇ ಅಕ್ಷಯ್ ಮಚ್ಛೇಂದ್ರ ಉದ್ಘಾಟಿಸಲಿರುವರು.
ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟಿಸಲಿರುವರು. ಅ.17ರಂದು ನಡೆಯುವ ಎರಡನೇ ದಿನದ ಕಾರ್ಯಕ್ರಮವನ್ನು ಸಂಜೆ 4 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವ ಕುಮಾರ್ ಉದ್ಘಾಟಿಸಲಿರುವರು. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಸಂಘದ ದಶಮಾನೋತ್ಸವದ ಪ್ರಯುಕ್ತ ಜೋಡುಕಟ್ಟೆಯಿಂದ 30 ಜಿಲ್ಲೆಗಳ ಟ್ಯಾಬ್ಲೋಗಳನ್ನೊಳಗೊಂಡ ಪುರಮೆರವಣಿಗೆ ನಡೆಯಲಿದೆ.
ಅ.18ರಂದು ಬೆಳಗ್ಗೆ 10 ಗಂಟೆಗೆ ಮೂರನೇ ದಿನ ನಡೆಯುವ ಉಡುಪಿ ಜಿಲ್ಲಾ ದಶಮಾನೋತ್ಸವ ಕಾರ್ಯ ಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿರುವರು. ಮೂರು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ಆರೋಗ್ಯ ಶಿಬಿರಗಳು, ಪ್ರಾತ್ಯಕ್ಷಿಕೆ, ಸಂಗೀತ, ಉಪನ್ಯಾಸ ಮತ್ತು ವಿಚಾರಗೋಷ್ಠಿ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಕ್ಕೆ ನೋಂದಾಯಿತ ಸಂಘದ ಸದಸ್ಯರಿಗೆ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ವಸ್ತು ಪ್ರದರ್ಶನದಲ್ಲಿ ಒಟ್ಟು 150 ಸ್ಟಾಲುಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘದ ಸಂಸ್ಥಾಪಕರಾದ ಮೆಹೆಬೂಬ ಮುಲ್ಲಾ ಸಿದ್ದಾಪುರ, ಗುಂಡಯ್ಯಸ್ವಾಮಿ ಹಿರೇಮಠ, ಎಂ.ರಾಜಾಸಾಬ ಗಂಗಾವತಿ, ಮಂಜುನಾಥ ಎಸ್.ಕೋರಿ ಕೊಪ್ಪಳ, ಪ್ರಮುಖರಾದ ರಫೀಕ್ ಎಸ್. ಪುಣೇಕರ್, ಜಾವೀದ್ ಖಾನ್ ರಾಯಚೂರ್, ಇಮ್ತಿಯಾಜ್ ಮುಲ್ಲಾ, ಬಿ.ಶೇಷಯ್ಯ ಸಿರುಗುಪ್ಪ, ಕೆ.ದಾಮೋದರ್ ಶೆಟ್ಟಿಗಾರ್, ರಮಣಯ್ಯ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್ ಉಪಸ್ಥಿತರಿದ್ದರು.