ಕರ್ನಾಟಕ ಸರ್ಕಾರಕ್ಕೆ 2,900 ಕೋಟಿ ರೂ. ದಂಡ (ಪರಿಸರ ಪರಿಹಾರ) ವಿಧಿಸಿದ ಎನ್ಜಿಟಿ

Photo: PTI
ಹೊಸದಿಲ್ಲಿ: ಘನ ಮತ್ತು ದ್ರವ ರೂಪದ ತ್ಯಾಜ್ಯ ನಿರ್ವಹಣೆ ವೇಳೆ ಪರಿಸರಕ್ಕೆ ಹಾನಿಯುಂಟು ಮಾಡಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್(national green tribunal) ರೂ 2,900 ಕೋಟಿ ದಂಡ (ಪರಿಸರ ಪರಿಹಾರ) ವಿಧಿಸಿದೆ.
ಪರಿಸರಕ್ಕೆ ಉಂಟಾಗುತ್ತಿರುವ ಸತತ ಹಾನಿಯನ್ನು ಪರಿಗಣಿಸಿ ಎನ್ಜಿಟಿ ಕಾಯಿದೆಯ ಸೆಕ್ಷನ್ 15 ಅನ್ವಯ ಈ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಟ್ರಿಬ್ಯುನಲ್ ಹೇಳಿದೆ.
ಆದೇಶವನ್ನು ಜಸ್ಟಿಸ್ ಆದರ್ಶ್ ಕುಮಾರ್ ಗೋಯೆಲ್ ಅವರ ನೇತೃತ್ವದ ಟ್ರಿಬ್ಯುನಲ್ ಪೀಠ ನೀಡಿದೆ. ದಂಡ ಮೊತ್ತವನ್ನು ಸರಕಾರ ಎರಡು ತಿಂಗಳೊಳಗೆ ಠೇವಣಿಯಿರಿಸಬೇಕು ಹಾಗೂ ನಂತರ ಆ ಮೊತ್ತವನ್ನು ಪರಿಹಾರ ಕಾರ್ಯಗಳಿಗೆ ಆರು ತಿಂಗಳೊಳಗೆ ಬಳಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
"1427.4 ಎಂಎಲ್ಡಿ ದ್ರವ ರೂಪದ ತ್ಯಾಜ್ಯ ಅಥವಾ ಒಳಚರಂಡಿ ತ್ಯಾಜ್ಯ ನಿರ್ವಹಣೆಯಾಗದೇ ಇರುವುದಕ್ಕೆ ರೂ. 2856 ಕೋಟಿ, 178.59 ಎಂಟಿ ಪಳೆಯುಳಿಕೆ ತ್ಯಾಜ್ಯ ನಿರ್ವಹಣೆ ಮಾಡಿಲ್ಲ, ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡದೇ ಇರುವುದಕ್ಕೆ ದಂಡ ರೂ. 540 ಕೋಟಿ, ಹೀಗೆ ಒಟ್ಟು ಪರಿಸರ ಪರಿಹಾರ ಮೊತ್ತ ರೂ 3396 ಕೋಟಿ. ಇದರಲ್ಲಿ ಅಕ್ಟೋಬರ್ 10 ರ ಆದೇಶದಲ್ಲಿ ವಿಧಿಸಲಾದ ಪರಿಸರ ಪರಿಹಾರ ರೂ 500 ಕೋಟಿ ಕಡಿತಗೊಳಿಸಲಾಗಿದೆ, ಉಳಿದ ಮೊತ್ತವಾದ ರೂ. 2900 ಕೋಟಿಯನ್ನು ಸರಕಾರ ನೀಡಬೇಕು" ಎಂದು ಆದೇಶ ತಿಳಿಸಿದೆ.