ಶಾಸಕ ಹರೀಶ್ ಪೂಂಜಾಗೆ 'ಬೆದರಿಕೆ' ಪ್ರಕರಣ; ಕಾರಿನಲ್ಲಿ ಸ್ಪ್ಯಾನರ್ ಪತ್ತೆ, ಎರಡು ಮೊಬೈಲ್ ವಶ: ದ.ಕ. ಜಿಲ್ಲಾ ಎಸ್ಪಿ

ಶಾಸಕ ಹರೀಶ್ ಪೂಂಜಾ
ಬಂಟ್ವಾಳ, ಅ.15: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿಯ ಕಾರಿನಲ್ಲಿ ಸ್ಪ್ಯಾನರ್ ಪತ್ತೆಯಾಗಿದ್ದು, ಆರೋಪಿಯಿಂದ ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು ಆರೋಪಿ ರಿಯಾಝ್ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಆರೋಪಿಯಿಂದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಘಟನೆಯ ವೇಳೆ ಆರೋಪಿ ಬಳಸಿದ ಸ್ಕಾರ್ಪಿಯೊ ಕಾರಿನಿಂದ ಒಂದು 'ಸ್ಪ್ಯಾನರ್ ರಾಡ್ ವ್ರೆಂಚ್' (ವಾಹನದಲ್ಲಿ ಬಳಸುವ ಉಪಕರಣ) ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿ ರಿಯಾಝ್ ದೂರುದಾರರಿಗೆ ಬೆದರಿಕೆ ಹಾಕಲು ಈ ಸ್ಪ್ಯಾನರ್ (ಹೊಳೆಯುವ ಎಲ್ ಆಕಾರದ ಉಪಕರಣ) ಬಳಸಿದ್ದರು. ದೂರುದಾರರನ್ನು ನಿಂದಿಸುವಾಗ ಸ್ಪ್ಯಾನರ್ ಬೀಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಆರೋಪಿಗೆ ಜಾಮೀನು
ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಬೆನ್ನಟ್ಟಿ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿಗೆ ಬಂಟ್ವಾಳ ಪ್ರಥಮ ದರ್ಜೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಆರೋಪಿ, ಮಂಗಳೂರು ಫಳ್ನೀರ್ ನಿವಾಸಿ ರಿಯಾಝ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಆರೋಪಿಯ ಪರ ವಕೀಲರಾದ ಸಾಯಿ ಪ್ರಕಾಶ್, ಅಶ್ಫಾಕ್ ವಾದ ಮಂಡಿಸಿದರು.