ಬ್ಯಾರಿ ಭಾಷೆಗೆ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು: ಬಿ.ಎ. ಮುಹಮ್ಮದ್ ಹನೀಫ್
ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನ
ದೇರಳಕಟ್ಟೆ, ಅ.15: ತುಳುವಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಿದಂತೆ ಕರಾವಳಿಯ ಬಹುಪಾಲು ಮುಸ್ಲಿಮರು ಮಾತನಾಡುವ ಬ್ಯಾರಿ ಭಾಷೆಗೂ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಅಭಿಪ್ರಾಯಪಟ್ಟರು.
ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ ಮೇಲ್ತೆನೆಯ ವತಿಯಿಂದ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನ ಮರ್ಹೂಂ ಕುರಿಯ ಶೇಖ್ ಹಾಜಿ ವೇದಿಕೆ ಮತ್ತು ಹಿರಿಯ ಸಾಹಿತಿ ಮರ್ಹೂಂ ಯು.ಎ. ಕಾಸಿಂ ಉಳ್ಳಾಲ್ ದ್ವಾರದಲ್ಲಿ ಶನಿವಾರ ನಡೆದ ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಠ್ಯ ಪುಸ್ತಕದಲ್ಲಿ ಬ್ಯಾರಿ ಭಾಷೆಗೆ ಅವಕಾಶ ನೀಡಬೇಕು. ಆಕಾಶವಾಣಿಯಲ್ಲಿ ಬ್ಯಾರಿ ಭಾಷೆಯ ಪ್ರಸಾರ ಆಗಬೇಕು. ಮಂಗಳೂರು ಅಥವಾ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಬ್ಯಾರಿ ಭವನ ನಿರ್ಮಿಸಬೇಕು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ನಿರ್ಲಕ್ಷಿಸದೆ ರಾಜ್ಯ ಸರಕಾರ ಶೀಘ್ರ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಬೇಕು ಎಂದು ಬಿ.ಎ. ಮುಹಮ್ಮದ್ ಹನೀಫ್ ಆಗ್ರಹಿಸಿದರು.
ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್‌ನ ಅಧ್ಯಕ್ಷ ಹಾಜಿ ಯು.ಕೆ. ಕಣಚೂರು ಮೋನು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯೆ ಆಯಿಶಾ ಡಿ. ಅಬ್ಬಾಸ್, ದೇರಳಕಟ್ಟೆಯ ಬದ್ರಿಯಾ ಜುಮಾ ಮಸ್ಜಿದ್‌ನ ಅಧ್ಯಕ್ಷ ಅಬೂಬಕರ್ ಹಾಜಿ ನಾಟೆಕಲ್, ಜೆಡಿಎಸ್ ಮುಖಂಡ ನಾಟೆಕಲ್ ಅಬೂಬಕರ್ ಹಾಜಿ, ಜಿಪಂ ಮಾಜಿ ಸದಸ್ಯ ಅಬ್ದುಲ್ ಅಝೀಝ್ ಮಲಾರ್, ಕೆಪಿಸಿಸಿ ಕೋ- ಆರ್ಡಿನೇಟರ್ ಫಾರೂಕ್ ಉಳ್ಳಾಲ್, ಉದ್ಯಮಿ ಡಾ.ಕೆ.ಎಂ.ಮುನೀರ್ ಬಾವಾ, ಕಣಚೂರು ಪಿಯು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕುನಿಲ್ ಪಬ್ಲಿಕ್ ಸ್ಕೂಲ್‌ನ ಉಪಾಧ್ಯಕ್ಷ ಪಿ.ಎಸ್. ಮೊಯ್ದಿನ್ ಕುಂಞಿ, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಸಿಪಿಎಂ ಮುಖಂಡ ರಫೀಕ್ ಹರೇಕಳ ಭಾಗವಹಿಸಿದ್ದರು.
ಮೇಲ್ತೆನೆ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಆಲಿಕುಂಞಿ ಪಾರೆ, ಮನ್ಸೂರ್ ಅಹ್ಮದ್ ಸಾಮಣಿಗೆ, ಪ್ರಚಾರ ಸಮಿತಿಯ ಸಂಚಾಲಕರಾದ ಮಂಗಳೂರ ರಿಯಾಝ್, ಸೋಶಿಯಲ್ ಫಾರೂಕ್, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ನಝರ್ ಷಾ ಪಟ್ಟೋರಿ, ಅಬ್ದುಲ್ ರಝಾಕ್ ಶಾಲಿಮಾರ್, ನಾಸಿರ್ ಸಾಮಣಿಗೆ, ಮೂಸಾ ಅಬ್ಬಾಸ್ ಕುರಿಯಕ್ಕಾರ್, ಇಬ್ರಾಹಿಂ ಕುಂಞಿ ಪಾರೆ, ನಿಸಾರ್ ಅಹ್ಮದ್ ಸಾಮಣಿಗೆ, ಅಶೀರುದ್ದೀನ್ ಸಾರ್ತಬೈಲ್, ಸಿದ್ದೀಕ್ ಎಸ್.ರಾಝ್, ಆಸೀಫ್ ಬಬ್ಬುಕಟ್ಟೆ, ಅಶ್ರಫ್ ದೇರಳಕಟ್ಟೆ, ಲತೀಫ್ ಸಾಮಣಿಗೆ, ಕಲಂದರ್ ಶಾಫಿ ಅಸೈಗೋಳಿ,ಮುಸ್ತಾಫಾ ರೆಹಮಾನ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
*ಯು.ಕೆ. ಖಾಲಿದ್ ಉಳ್ಳಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಝೈನುದ್ದೀನ್ ಇನೋಳಿ, ಇಸ್ಮಾಯೀಲ್ ಉಳ್ಳಾಲ, ಇಬ್ರಾಹೀಂ ನಡುಪದವು, ಎಡ್ವರ್ಡ್ ಲೋಬೋ, ಬಿ.ಎಂ. ಕಿನ್ಯ ಕವನ ವಾಚಿಸಿದರು. ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಸ್ವಾಗತಿಸಿದರು. ಪತ್ರಕರ್ತ ಬಶೀರ್ ಕಲ್ಕಟ್ಟ ವಂದಿಸಿದರು.
*ಸಿಹಾನಾ ಬಿ.ಎಂ. ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಶಾ ಯು.ಕೆ. ಉಳ್ಳಾಲ, ರುಕ್ಸಾನಾ ಉಮರ್ ಉಳ್ಳಾಲ, ರಮೀಝಾ ಎಂ.ಬಿ. ಮಂಜನಾಡಿ, ಶಿಫಾ ಕೆ.ಎಂ. ಉಳ್ಳಾಲ, ಸಾರಾ ಮಸ್ಕರುನ್ನಿಸಾ, ಆಯಿಶತ್ ಸಫ್ವಾನಾ ಉಳ್ಳಾಲ, ಹುದಾ ಅಕ್ಕರಕ್ಕೆರೆ ಕವನ ವಾಚಿಸಿದರು. ಶಿಕ್ಷಕಿ ದಿಲ್‌ಶಾದ್ ಎಂ. ಸ್ವಾಗತಿಸಿ, ವಂದಿಸಿದರು.
* ಸಮಾರೋಪ ಸಮಾರಂಭದಲ್ಲಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್, ಪೀಠದ ಸಲಹಾ ಸಮಿತಿಯ ಸದಸ್ಯ ಹಾಜಿ ಇಬ್ರಾಹೀಂ ಕೋಡಿಜಾಲ್, ರಾಜ್ಯ ಆಹಾರ ಜಾಗೃತಿ ಸಮಿತಿಯ ಮಾಜಿ ನಿರ್ದೇಶಕ ಹಾಜಿ ಟಿ.ಎಸ್. ಅಬ್ದುಲ್ಲಾ ಸಾಮಣಿಗೆ, ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳಾದ ಹೈದರ್ ಪರ್ತಿಪ್ಪಾಡಿ, ಬ್ಯಾರಿ ಅಕಾಡಮಿಯ ಸದಸ್ಯ ಹೈದರಾಲಿ ಕೆ., ಉದ್ಯಮಿ ಎಸ್.ಕೆ. ಖಾದರ್ ಹಾಜಿ, ಜಿಪಂ ಮಾಜಿ ಸದಸ್ಯ ಎನ್.ಎಸ್. ಕರೀಂ, ಹಿರಿಯ ಪತ್ರಕರ್ತ ಡಿ.ಐ.ಅಬೂಬಕರ್ ಕೈರಂಗಳ, ಎಸ್ಸೆಸ್ಸೆಫ್ ರಾಷ್ಟ್ರೀಯ ಮುಖಂಡ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್‌ಡಿಪಿಐ ಮುಖಂಡ ನೌಶಾದ್ ಕಲ್ಕಟ್ಟ, ಬ್ಯಾರಿ ಅಕಾಡಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್, ಹಾಜಿ ಅಬೂಸಾಲಿಹ್ ಪಾರೆ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮೇಳನಾಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್, ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಉಳ್ಳಾಲ್ ಹಾಗೂ ವಿವಿಧ ಕ್ಷೇತ್ರದ ಸಾಧಕರಾದ ಪಿ.ಕೆ. ಅಹ್ಮದ್ ಫಿಶ್‌ಮೋನು, ಡಾ.ಮುಹಮ್ಮದ್ ಅಶ್ರಫ್, ಶಮೀಮಾ ಕುತ್ತಾರ್ ಅವರನ್ನು ಸನ್ಮಾನಿಸಲಾಯಿತು. ಆಶುಕವನ ಮತ್ತು ಮೆಹಂದಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬ್ಯಾರಿ ಸಾಹಿತ್ಯ ಸಮ್ಮೇಳನದ ನಿರ್ಣಯಗಳು
*ಬ್ಯಾರಿ ಭಾಷೆಯನ್ನು ಅಲ್ಪ ಸಂಖ್ಯಾತ ಭಾಷೆಯನ್ನಾಗಿ ಅಂಗೀಕರಿಸಬೇಕು. ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ದೊರಕುವ ಎಲ್ಲಾ ಸೌಲಭ್ಯಗಳು ಬ್ಯಾರಿ ಶಿಕ್ಷಣ ಸಂಸ್ಥೆಗಳಿಗೆ ದೊರಕಬೇಕು. ಬ್ಯಾರಿ ಜನಾಂಗದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರಿಗೆ ಸಿಗುವ ಮೀಸಲಾತಿ ಒದಗಿಸಿ ಕೊಡುವುದು. ಬ್ಯಾರಿ ಜನಾಂಗದ ವಿದ್ಯಾರ್ಥಿಗಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು.
*ಬ್ಯಾರಿ ಭಾಷೆಯನ್ನು ಭಾಷಾ ಪಠ್ಯ ಕ್ರಮದಲ್ಲಿ ಸೇರಿಸಿ ಎರಡನೇ ಭಾಷೆಯಾಗಿ ಕಲಿಯಲು ಅವಕಾಶ ಮಾಡಿಕೊಡುವುದು.
*ಬ್ಯಾರಿ ಭಾಷೆಯನ್ನು ಪರಿಚ್ಛೇದ 8 ರಲ್ಲಿ ಸೇರಿಸುವುದು ಹಾಗೂ ಈ ಮೂಲಕ ಸಂವಿಧಾನ ತಿದ್ದಪಡಿ ಮಾಡುವುದು.