ಉ.ಪ್ರ. ಪೊಲೀಸರು ನನ್ನ ಪತ್ನಿಯ ಹತ್ಯೆಗೈದರು: ಬಿಜೆಪಿ ನಾಯಕ ಗುರ್ತಾಜ್ ಸಿಂಗ್ ಭುಲ್ಲರ್ ಆರೋಪ
ಉತ್ತರಾಖಂಡ ಗುಂಡಿನ ಕಾಳಗ ಪ್ರಕರಣ

ಹೊಸದಿಲ್ಲಿ, ಅ. 15: ಅಕ್ಟೋಬರ್ 12ರಂದು ತನ್ನ ಪತ್ನಿ ಗುಪ್ರೀðತ್ ಕೌರ್ ಸಾವಿಗೆ ಕಾರಣವಾದ ದಾಳಿಯಲ್ಲಿ ಭಾಗಿಯಾಗಿರುವ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳ ವಿರುದ್ಧ ಉತ್ತರಾಖಂಡ ಜಸ್ಪುರದ ಬಿಜೆಪಿಯ ಹಿರಿಯ ಬ್ಲಾಕ್ ಪ್ರಮುಖ್ ಗುರ್ತಾಜ್ ಸಿಂಗ್ ಭುಲ್ಲರ್ ಅವರು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಉತ್ತರಪ್ರದೇಶ ಪೊಲೀಸರ ತಂಡ ಮದ್ಯ ಸೇವಿಸಿ ತನ್ನ ನಿವಾಸದ ಮೇಲೆ ದಾಳಿ ನಡೆಸಿತು. ಅವರಲ್ಲಿ ಸರ್ಚ್ ವಾರಂಟ್ ಇರಲಿಲ್ಲ. ಸಾದಾ ಉಡುಪಿನಲ್ಲಿ ಆಗಮಿಸಿದ್ದರು ಎಂದು ಗುರ್ತಾಜ್ ಸಿಂಗ್ ಭುಲ್ಲರ್ ಆರೋಪಿಸಿದ್ದಾರೆ. ಈ ಸಂದರ್ಭ ನಡೆದ ವಾಗ್ವಾದದ ಸಂದರ್ಭ ಓರ್ವ ಪೊಲೀಸ್ ಗುಂಡು ಹಾರಿಸಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿರುವ ಭುಲ್ಲರ್, ತನಿಖೆಯಲ್ಲಿ ತನ್ನ ತಪ್ಪು ಸಾಬೀತಾದರೆ ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
‘‘ನಾನು ಬಿಜೆಪಿಯ ಬ್ಲಾಕ್ ಪ್ರಮುಖ್. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರಕಾರದ ಆಡಳಿತ ಇದೆ. ಆದರೂ ನನ್ನಂತಹ ವ್ಯಕ್ತಿಗೆ ನ್ಯಾಯ ಸಿಗದಿದ್ದರೆ, ಸಾಮಾನ್ಯ ಜನರಲ್ಲಿ ಯಾವ ಭರವಸೆ ಉಳಿದೀತು?’’ ಎಂದು ಅವರು ಪ್ರಶ್ನಿಸಿದ್ದಾರೆ.
ಗಣಿ ಮಾಫಿಯಾದ ಆರೋಪಿ ಝಾಫರ್‌ನ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತ ಉತ್ತರಾಖಂಡ ಉಧಮ್ ಸಿಂಗ್ ನಗರ್ ಜಿಲ್ಲೆಯ ಖಾಶಿಪುರ ಸಮೀಪದ ಭುಲ್ಲರ್ ಅವರ ನಿವಾಸದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ತಂಡಕ್ಕೆ ಸುಳಿವು ದೊರಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಭುಲ್ಲರ್‌ನ ನಿವಾಸದ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭ ಗುಂಡಿನ ಕಾಳ ನಡೆದಿತ್ತು.







