ಮಾನವೀಯತೆಯ ಉಳಿವಿಗಾಗಿ ದ್ವೇಷಭಾವ ಮರೆತು ಎಲ್ಲರೂ ಒಂದಾಗಬೇಕಿದೆ: ಉಮರ್ ಟೀಕೆ
ಲಯನ್ಸ್ ವತಿಯಿಂದ ಈದ್ ಸಂಭ್ರಮ ಕಾರ್ಯಕ್ರಮ

ಮಂಗಳೂರು, ಅ.15: ಮಾನವೀಯತೆಯ ಉಳಿವಿಗಾಗಿ ದ್ವೇಷಭಾವ ಮರೆತು ಎಲ್ಲಾ ಧರ್ಮದ ಜನರು ಒಂದಾಗಬೇಕಾಗಿದೆ. ಎಲ್ಲರನ್ನು ಒಂದುಗೂಡಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಧರ್ಮಗಳ ಮೂಲ ಆಶಯವಾಗಿದೆ ಎಂದು ಟೀಕೇಸ್ ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಉಮರ್ ಟೀಕೆ ಹೇಳಿದ್ದಾರೆ.
ಲಯನ್ಸ್ ಜಿಲ್ಲೆ 317D ವತಿಯಿಂದ ನಗರದ ಉರ್ವ ಚರ್ಚ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಈದ್ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಂದಿನ ಸಮಾಜದಲ್ಲಿ ಆಗುತ್ತಿರುವ ಎಲ್ಲಾ ಕೆಡುಕುಗಳಿಗೂ ದ್ವೇಷವೇ ಮುಖ್ಯ ಕಾರಣ. ದ್ವೇಷವನ್ನು ಅಳಿಸಿ ಸಮಾಜದ ಎಲ್ಲ ಧರ್ಮಗಳ ಜನರ ನಡುವೆ ಮಾನವೀಯತೆ ಉಳಿಸಲು ನಾವೆಲ್ಲರೂ ಒಂದುಗೂಡಿ ಹೋರಾಡಬೇಕಾಗಿದೆ ಎಂದು ಉಮರ್ ಟೀಕೆ ಹೇಳಿದರು.
ಜಗತ್ತಿನ ಎಲ್ಲ ಜನರು ಒಂದೇ ಕುಟುಂಬದ ಸದಸ್ಯರು ಎಂದು ಭಗವದ್ಗೀತೆಯಲ್ಲಿ ಸಾರಲಾಗಿದೆ. ಕುರ್‌ಆನ್ ಕೂಡಾ ಶಾಂತಿಯ ಸಂದೇಶವನ್ನು ಸಾರುತ್ತದೆ. ಬೌದ್ಧ, ಜೈನ ಧರ್ಮಗಳು ಮಾನವೀಯತೆ ಸಂದೇಶವನ್ನು ಸಾರುತ್ತದೆ. ಈ ಜಗತ್ತಿನಲ್ಲಿ ಶಾಂತಿಯನ್ನು ಬಯಸುವ ಪ್ರತಿಯೊಬ್ಬರು ಆಚರಿಸುತ್ತಿರುವ ಎಲ್ಲಾ ಧರ್ಮಗಳು ಶ್ರೇಷ್ಠವಾದುದು ಎಂದು ಅವರು ಹೇಳಿದರು.
ಲಯನ್ಸ್ ಜಿಲ್ಲಾ ಸಂಯೋಜಕಿ ಮೈಮುನಾ ಮೊಹಿದಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ 317D ಗವರ್ನರ್ ಸಂಜಿತ್ ಶೆಟ್ಟಿ, ಸಂಯೋಜಕ ವಸಂತ್ ಕುಮಾರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.










.jpeg)



.jpeg)

