ಅ.16ರಿಂದ ಆಸ್ಟ್ರೇಲಿಯದಲ್ಲಿ ಟ್ವೆಂಟಿ-20 ವಿಶ್ವಕಪ್ ಆರಂಭ
ಮೊದಲ ಸುತ್ತಿನ ಪಂದ್ಯದಲ್ಲಿ ನಮೀಬಿಯಾ-ಶ್ರೀಲಂಕಾ ತಂಡಗಳು ಮುಖಾಮುಖಿ

Photo:twitter
ಜಿಲಾಂಗ್, ಅ.15: ಎಂಟನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ವಿಕ್ಟೋರಿಯ ರಾಜ್ಯದ ಜಿಲಾಂಗ್ನಲ್ಲಿ ರವಿವಾರ ಆರಂಭವಾಗಲಿದ್ದು, ಮೊದಲ ಸುತ್ತಿನ ‘ಎ’ ಗುಂಪಿನ ಪಂದ್ಯದಲ್ಲಿ ನಮೀಬಿಯಾ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತವೆ. ದಿನದ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ ಹಾಗೂ ಯುಎಇ ಸೆಣಸಾಡುತ್ತವೆ.
ಅಗ್ರ-8 ತಂಡಗಳಾದ ಆಸ್ಟ್ರೇಲಿಯ, ಭಾರತ, ಪಾಕಿಸ್ತಾನ, ಇಂಗ್ಲೆಂಡ್, ನ್ಯೂಝಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳು ಅ.22ರ ಬಳಿಕ ಸೂಪರ್-12ರ ಸುತ್ತಿನಲ್ಲಿ ಆಡುತ್ತವೆ. ಅದಕ್ಕೂ ಮೊದಲು ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತವೆ.
ಸೂಪರ್-12 ಸುತ್ತಿಗೆ 8 ತಂಡಗಳಿಗೆ ನೇರ ಪ್ರವೇಶ ನೀಡಲಾಗಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ಗಳಾದ ವೆಸ್ಟ್ಇಂಡೀಸ್ ಹಾಗೂ ಶ್ರೀಲಂಕಾ ತಂಡವಲ್ಲದೆ ಝಿಂಬಾಬ್ವೆ, ಐರ್ಲ್ಯಾಂಡ್, ಯುಎಇ, ನೆದರ್ಲ್ಯಾಂಡ್, ನಮೀಬಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಆಡುತ್ತವೆ. ಮೊದಲ ಸುತ್ತಿನ ಪಂದ್ಯವು ಅ.16ರಿಂದ ಆರಂಭವಾಗಿ 21ರ ತನಕ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಸೆಣಸಲಿರುವ ತಂಡಗಳನ್ನು 2 ಗುಂಪುಗಳಾಗಿ ವಿಭಜಿಸಲಾಗಿದ್ದು, ‘ಎ’ ಗುಂಪಿನಲ್ಲಿ ಶ್ರೀಲಂಕಾ, ನಮೀಬಿಯಾ, ನೆದರ್ಲ್ಯಾಂಡ್ ಹಾಗೂ ಯುಎಇ ಇದೆ. ‘ಬಿ’ ಗುಂಪಿನಲ್ಲಿ ವೆಸ್ಟ್ಇಂಡೀಸ್, ಝಿಂಬಾಬ್ವೆ, ಸ್ಕಾಟ್ಲೆಂಡ್ ಹಾಗೂ ಐರ್ಲ್ಯಾಂಡ್ ತಂಡಗಳಿವೆ.
ಮೊದಲ ಸುತ್ತಿನಲ್ಲಿ ಒಟ್ಟು 14 ಪಂದ್ಯಗಳು ನಡೆಯುತ್ತವೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-12ರ ಸುತ್ತಿಗೆ ತಲುಪುತ್ತವೆ. ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಹಾಗೂ ಬಿ ಗುಂಪಿನಲ್ಲಿ 2ನೇ ಸ್ಥಾನ ಪಡೆಯುವ ತಂಡ ಗ್ರೂಪ್1ಕ್ಕೆ(ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಝಿಲ್ಯಾಂಡ್,ಅಫ್ಘಾನಿಸ್ತಾನ)ಸೇರುತ್ತವೆ.
ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಹಾಗೂ ಎ ಗುಂಪಿನ ಎರಡನೇ ಸ್ಥಾನ ಪಡೆಯುವ ತಂಡವು ಭಾರತ,ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ಒಳಗೊಂಡ ಗ್ರೂಪ್-2ರಲ್ಲಿ ಸೇರ್ಪಡೆಯಾಗುತ್ತವೆ.
ಆಸ್ಟ್ರೇಲಿಯ ಇದೇ ಮೊದಲ ಬಾರಿ ಟಿ-20 ವಿಶ್ವಕಪ್ ಆತಿಥ್ಯ ವಹಿಸಿದೆ. 2020ರಲ್ಲಿ ಇಲ್ಲಿ ವಿಶ್ವಕಪ್ ನಡೆಯಬೇಕಾಗಿತ್ತು. ಕೋವಿಡ್-19 ಕಾರಣದಿಂದ ಅದು ನಡೆಯಲಿಲ್ಲ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಆವೃತ್ತಿಯ ವಿಶ್ವಕಪ್ನ್ನು ಭಾರತ ಗೆದ್ದುಕೊಂಡಿತ್ತು.ಪಾಕಿಸ್ತಾನ(2009), ಇಂಗ್ಲೆಂಡ್(2010), ವೆಸ್ಟ್ಇಂಡೀಸ್(2012 ಹಾಗೂ 2016), ಶ್ರೀಲಂಕಾ(2014) ಹಾಗೂ 2021ರಲ್ಲಿ ಆಸ್ಟ್ರೇಲಿಯ ಪ್ರಶಸ್ತಿ ಜಯಿಸಿದೆ.
ಸೂಪರ್-12 ಹಂತವು ಅ.22ರಂದು ಕಳೆದ ವರ್ಷದ ವಿಶ್ವಕಪ್ ಫೈನಲಿಸ್ಟ್ಗಳಾದ ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ತಂಡಗಳ ಸೆಣಸಾಟದೊಂದಿಗೆ ಸಿಡ್ನಿಯಲ್ಲಿ ಆರಂಭವಾಗುತ್ತದೆ.