ಜಾರ್ಖಂಡ್: ವಿದ್ಯಾರ್ಥಿನಿಯ ಆತ್ಮಾಹುತಿ ಪ್ರಯತ್ನ ಶಿಕ್ಷಕಿಯ ಬಂಧನ

ಜೆಮ್ಶದ್‌ಪುರ, ಅ. 15: ಜಾರ್ಖಂಡ್‌ನಲ್ಲಿ ಪರೀಕ್ಷಾರ್ಥಿ ಆತ್ಮಾಹುತಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪರೀಕ್ಷೆಯಲ್ಲಿ ಸಮವಸ್ತ್ರದ ಒಳಗೆ ಚೀಟಿ ಅಡಗಿಸಿಟ್ಟು ನಕಲು ಮಾಡುತ್ತಿದ್ದಾಳೆ ಎಂದು ಆರೋಪಿಸಿ ಶಿಕ್ಷಕಿ ಉಡುಪುಗಳನ್ನು ಕಳಚುವಂತೆ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಬಲವಂತಪಡಿಸಿದ್ದರು. ಇದರಿಂದ ಮನನೊಂದ ವಿದ್ಯಾರ್ಥಿನಿ ಆತ್ಮಾಹುತಿಗೆ ಪ್ರಯತ್ನಿಸಿದ್ದಳು.
ಘಟನೆ ನಡೆದ ಬಳಿಕ ಶುಕ್ರವಾರ ರಾತ್ರಿ ಶಿಕ್ಷಕಿಯನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ನಗರ) ಕೆ. ವಿಜಯ ಶಂಕರ್ ಅವರು ತಿಳಿಸಿದ್ದಾರೆ.
ಆತ್ಮಾಹುತಿ ಪ್ರಯತ್ನದಲ್ಲಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಇಲ್ಲಿನ ಟಾಟಾ ಮುಖ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಕೇಂದ್ರೀಯ ಮುಖಿ ಸಮಾಜ್ ಕಾರ್ಯಕರ್ತರು ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಶಿಕ್ಷಣ ಅಧಿಕಾರಿಯ ಕಚೇರಿಯ ಎದುರು ಶನಿವಾರ ಧರಣಿ ನಡೆಸಿದ್ದಾರೆ ಹಾಗೂ ಶಿಕ್ಷಕಿಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.





