ಖರಗ್‌ಪುರ ಐಐಟಿಯ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕೋಲ್ಕತಾ, ಅ. 15: ಖರಗ್‌ಪುರ ಐಐಟಿಯ ಹಾಸ್ಟೆಲ್ ಕೊಠಡಿಯಲ್ಲಿ ತೃತೀಯ ವರ್ಷದ ವಿದ್ಯಾರ್ಥಿಯೋರ್ವನ ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ ಒಂದು ವಾರದಲ್ಲಿ ಐಐಟಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗುತ್ತಿರುವ ಎರಡನೇ ಘಟನೆ ಇದಾಗಿದೆ.
ಹಾಸ್ಟೆಲ್‌ನ ಮುಚ್ಚಿದ್ದ ಕೊಠಡಿಯ ಬಾಗಿಲನ್ನು ಶುಕ್ರವಾರ ಬಲವಂತವಾಗಿ ತೆರೆದಾಗ ವಿದ್ಯಾರ್ಥಿ ಪೈನಾಝ್ ಅಹ್ಮದ್ ಅವರ ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಯಿತು ಎಂದು ಖರಗ್‌ಪುರ ಐಐಟಿಯ ರಿಜಿಸ್ಟ್ರಾರ್ ತಮಲ್ ನಾಥ್ ಅವರು ತಿಳಿಸಿದ್ದಾರೆ.
ಸದ್ಯ ವಿದ್ಯಾರ್ಥಿಯ ಸಾವಿನ ಹಿಂದೆ ಯಾರದ್ದಾದರೂ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿಲ್ಲ. ಸಾವಿನ ಹಿಂದಿನ ಸನ್ನಿವೇಶದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಖರಗ್‌ಪುರ ಐಐಟಿಯ ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ತೃತೀಯ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಫೈನಾಝ್ ಅವರನ್ನು ಕೊನೆಯ ಬಾರಿಗೆ ನೋಡಿರುವುದು ಅಕ್ಟೋಬರ್ ೧೩ರಂದು ಎಂದು ಅವರ ಗೆಳೆಯರು ತಿಳಿಸಿದ್ದಾರೆ.
ಫೈನಾಝ್ ಅಸ್ಸಾಂನ ತೀನ್‌ಸುಕಿಯಾ ಜಿಲ್ಲೆಯ ನಿವಾಸಿ. ಅವರು ಬುದ್ದಿವಂತ ವಿದ್ಯಾರ್ಥಿಯಾಗಿದ್ದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರು ಎಂದು ನಾಥ್ ಅವರು ಹೇಳಿದ್ದಾರೆ.
ಫೈನಾಝ್‌ನನ್ನು ಹತ್ಯೆಗೈಯಲಾಗಿದೆ ಎಂದು ಆತನ ಹೆತ್ತವರು ಆರೋಪಿಸಿದ್ದಾರೆ ಹಾಗೂ ಪ್ರಕರಣದ ಕುರಿತು ಪೊಲೀಸರಿಂದ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.







