ಅ.18 ರಂದು ಹೋರಾಟ ನಡೆಯಲಿದೆ, ಯಾವುದೇ ಬದಲಾವಣೆಗಳಿಲ್ಲ: ದಿನೇಶ್ ಹೆಗ್ಡೆ ಉಳೆಪಾಡಿ
'ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರ ಮನೆಗೆ ಪೊಲೀಸ್ ನೋಟಿಸ್ ಖಂಡನೀಯ'
ಸುರತ್ಕಲ್, ಅ.16: ಸುರತ್ಕಲ್ ಟೋಲ್ ಗೇಟ್ (Toll gate) ವಿರೋಧಿ ಹೋರಾಟಗಾರರ ಮನೆಗಳಿಗೆ ರಾತ್ರೋರಾತ್ರಿ ತೆರಳಿ ನೋಟಿಸ್ ನೀಡಿರುವ ಪೊಲೀಸರ ಕ್ರಮ ಖಂಡನೀಯ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಅ.18ರಂದು ಹೋರಾಟ ನಡೆಯಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ತಿಳಿಸಿದ್ದಾರೆ.
ಪೊಲೀಸರ ಕ್ರಮದ ವಿರುದ್ಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾವು ನಿರೀಕ್ಷಿಸಿದಂತೆ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ವಿರುದ್ಧದ ಹೋರಾಟವನ್ನು ತಡೆಯಲು ಪೊಲೀಸರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನಾಗರಿಕರು ಹೋರಾಟ ಮಾಡುವಾಗ ಜನಪ್ರತಿನಿಧಿಗಳು ಬಂದು ಸಮಸ್ಯೆಯನ್ನು ಪರಿಹಾರಕ್ಕೆ ಪ್ರಯತ್ನಿಸಬೇಕಿತ್ತು. ಜಿಲ್ಲೆಯ ಜನರು ಅಕ್ರಮ ಟೋಲ್ ಗೇಟ್ ತೆಗೆಯಿರಿ ಎಂದು ಪ್ರಜಾಸಾತ್ತಾತ್ಮಕ ರೀತಿಯಲ್ಲಿ ಬೇಡಿಕೆ ಇಟ್ಟರೆ, ನಮ್ಮ ಶಾಸಕರು ಜನರ ಎದುರು ಬರಲು ಧೈರ್ಯ ಇಲ್ಲದೆ ಪೊಲೀಸರನ್ನು ಛೂ ಬಿಡುತ್ತಿದ್ದಾರೆ. ಪೊಲೀಸರ ಮುಖಾಂತರ ಹೂರಾಟಗಾರರನ್ನು ಕರೆದು ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಾರೆ. ಪೊಲೀಸರ ಮೂಲಕ ಸಮಯವಕಾಶ ಕೋರುತ್ತಾರೆ. ಅದ್ಯಾವುದಕ್ಕೂ ಬಗ್ಗದೆ ಇದ್ದಾಗ ಪೊಲೀಸರ ಮೂಲಕ ಶಾಂತಿ ಭಂಗ ಆಗುತ್ತಿದೆ ಎಂದು ನೆಪವೊಡ್ಡಿ ಹೋರಾಟಗಾರರ ಮನೆಗೆ ರಾತ್ರಿ 12 ಗಂಟೆಗೆ ಪೊಲೀಸರನ್ನು ಕಳಿಸಿ ಸೆಕ್ಷನ್ 107 ಸಿಆರ್ಪಿಸಿ ನೋಟಿಸ್ ಜಾರಿಗೊಳಿಸುತ್ತಾರೆ. ಹೋರಾಟಗಾರರು ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಕ್ರಮ ಟೋಲ್ ಗೇಟ್ ತೆರವಾಗಲೇಬೇಕು. ಶಾಸಕರು ಅಕ್ರಮ ಟೋಲ್ ಗೇಟ್ ರಕ್ಷಿಸಲು ಕಟ್ಟಿಬದ್ಧರಾಗಿ ನಿಂತಿದ್ದಾರೆ. ಈ ಹೋರಾಟ ಕರಾವಳಿ ಜಿಲ್ಲೆಯ ನಾಗರಿಕರು ಮತ್ತು ಅಕ್ರಮ ದಂಧೆ ನಡೆಸುವ ಶಾಸಕ, ಸಂಸದರ ಮದ್ಯೆ ಆಗಿದೆ. ನ್ಯಾಯ ಅನ್ಯಾಯದ ವಿರುದ್ಧ, ಅಕ್ರಮ ದಂಧೆಯ ವಿರುದ್ಧವಾಗಿದೆ ಎಂದಿದ್ದಾರೆ.
ಟೋಲ್ ಗೇಟ್ ತೆರವಿನ ಹೋರಾಟವು ಸಮಿತಿ ನಿರ್ಧರಿಸಿದಂತೆ ಅ.18 ರಂದು ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಲ್ಲೆಯ ಎಲ್ಲಾ ನಾಗರಿಕರು, ಸಂಘಸಂಸ್ಥೆಗಳು ನಿಗದಿತ ದಿನಾಂಕದಂದು ಪ್ರತಿಭಟನಾ ಸ್ಥಳದಲ್ಲಿದ್ದು, ಹೋರಾಟಕ್ಕೆ ಕೈಜೋಡಿಸಬೇಕೆಂದು ದಿನೇಶ್ ಹೆಗ್ಡೆ ಉಳೆಪಾಡಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ತಡರಾತ್ರಿ ಭೇಟಿ ನೀಡಿದ ಪೊಲೀಸರು: ಹಲವು ಮುಖಂಡರಿಗೆ ನೋಟಿಸ್