ಟ್ವೆಂಟಿ-20 ವಿಶ್ವಕಪ್ ಟೂರ್ನಿ: ಶ್ರೀಲಂಕಾ ವಿರುದ್ಧ ನಮೀಬಿಯಾಕ್ಕೆ ಐತಿಹಾಸಿಕ ಗೆಲುವು
ಆರಂಭಿಕ ಪಂದ್ಯದಲ್ಲಿ 55 ರನ್ ನಿಂದ ಸೋತ ಸಿಂಹಳೀಯರು

Photo:AFP
ಜೀಲಾಂಗ್(ವಿಕ್ಟೋರಿಯ): ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನ ಆರಂಭಿಕ ಪಂದ್ಯದಲ್ಲಿ ನಮೀಬಿಯಾ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ 55 ರನ್ ನಿಂದ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 164 ರನ್ ಗುರಿ ಪಡೆದಿದ್ದ ಶ್ರೀಲಂಕಾ ಭಾರೀ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು.19 ಓವರ್ ಗಳಲ್ಲಿ 108 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಲಂಕೆಯ ಪರ ನಾಯಕ ದಸುನ್ ಶನಕ (29 ರನ್, 23 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಭಾನುಕಾ ರಾಜಪಕ್ಸ(20 ರನ್, 21 ಎಸೆತ)ಹಾಗೂ ಧನಂಜಯ ಡಿಸಿಲ್ವ(12)ಎರಡಂಕೆಯ ಸ್ಕೋರ್ ಗಳಿಸಿದರು.
ನಮೀಬಿಯಾ ಬೌಲಿಂಗ್ ವಿಭಾಗದಲ್ಲಿ ಬೆರ್ನಾರ್ಡ್ ಸ್ಕೋಟ್ಜ್(2-18), ಬೆನ್ ಶಿಕೊಂಗೊ(2-22), ಡೇವಿಡ್ ವೈಸ್(2-16) ಹಾಗೂ ಫ್ರೈಲಿಂಕ್(2-26) ತಲಾ ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 93 ರನ್ ಗೆ ಆರು ವಿಕೆಟ್ ಗಳನ್ನು ಕಳೆದುಕೊಂಡಿದ್ದರೂ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಲು ಶಕ್ತವಾಯಿತು.
ಜಾನ್ ಫ್ರೈಲಿಂಕ್(44 ರನ್,28 ಎಸೆತ) ಹಾಗೂ ಜೆಜೆ ಸ್ಮಿತ್(ಔಟಾಗದೆ 31,16 ಎಸೆತ)ನಮೀಬಿಯಾ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ಲಂಕೆಯ ಪರ ಪ್ರಮೋದ್ ಮದುಶನ್(2-37)ಯಶಸ್ವಿ ಬೌಲರ್ ಎನಿಸಿಕೊಂಡರು.