ಮೂಡಿಗೆರೆ | ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ಬೆಂಗಳೂರು ಮೂಲದ ವ್ಯಕ್ತಿ ಸ್ಥಳದಲ್ಲೇ ಮೃತ್ಯು

ಮೂಡಿಗೆರೆ, ಅ.16: ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ (road accident) ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರವಿ (52) ಎಂದು ಗುರುತಿಸಲಾಗಿದೆ.
ರವಿ ತಮ್ಮ ಕುಟುಂಬಸ್ಥರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಹೋಗಿ ಮೂಡಿಗೆರೆ ಮೂಲಕ ಬೆಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಗೋಣಿಬೀಡು ಗ್ರಾಮದಲ್ಲಿರುವ ಚರ್ಚ್ ಎದುರಿನ ತಿರುವಿನಲ್ಲಿ ಪರಸ್ಪರ ಎದುರು ಬದುರಾದ ಕಾರುಗಳು ಮುಖಾಮುಖಿ ಢಿಕ್ಕಿಯಾಗಿವೆ. ಅಪಘಾತದ ತೀವ್ರತೆಗೆ ಬೆಂಗಳೂರಿನತ್ತ ಹೋಗುತ್ತಿದ್ದ ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಈ ಪೈಕಿ ರವಿ ತೀವ್ರ ಗಾಯದಿಂದ ರಕ್ತಸ್ರಾವಗೊಂಡು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮತ್ತೊಂದು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.
ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







.jpeg)

