ಸುರತ್ಕಲ್ ಟೋಲ್; ಬಿಜೆಪಿ ವರ್ಸಸ್ ತುಳುನಾಡು ನಡುವಿನ ಹೋರಾಟ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಉಡುಪಿ, ಅ.16: ಸುರತ್ಕಲ್ ಟೋಲ್ ಮೂಲಕ ಕಳೆದ ಆರು ವರ್ಷಗಳಲ್ಲಿ 400 ಕೋಟಿ ರೂ. ಅಧಿಕ ಹಣವನ್ನು ಜನರಿಂದ ವಸೂಲಿ ಮಾಡಲಾಗಿದೆ. ಈ ಟೋಲ್ ವಸೂಲಾತಿ ಹಾಗೂ ಗುತ್ತಿಗೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷದವರೇ ಶಾಮೀಲಾಗಿದ್ದಾರೆ. ಆದುದರಿಂದ ಈಗ ನಡೆಯುತ್ತಿರುವುದು ಬಿಜೆಪಿ ಮತ್ತು ತುಳುನಾಡು ನಡುವಿನ ಹೋರಾಟ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟೋಲ್ ವಿರುದ್ಧದ ಪ್ರತಿಭಟನೆಯಲ್ಲಿ ಆಡಳಿತ ಪಕ್ಷದವರು ಕೂಡ ಭಾಗವಹಿಸಿದ್ದಾರೆ. ಯಾಕೆಂದರೆ ನಮ್ಮ ಹೋರಾಟವನ್ನು ನಿಷ್ಕ್ರೀಯಗೊಳಿಸುವುದು ಇವರ ಉದ್ದೇಶವಾಗಿತ್ತು. ಈ ಟೋಲ್‌ನಿಂದ ಉಡುಪಿ ಜಿಲ್ಲೆಯ ಜನತೆಗೆ ಅನ್ಯಾಯವಾಗುತ್ತಿದ್ದರೂ ಇಲ್ಲಿನ ಸಂಸದರು, ಶಾಸಕರು ಮೌನವಾಗಿದ್ದಾರೆ. ಇವರು ನೀಡಿದ ಆಶ್ವಾಸನೆಗಳು ಈಗಾಗಲೇ ಅವಧಿ ಮೀರಿದೆ ಎಂದರು.
ಈ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್ ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ವಾಹನ, ಬಸ್, ಆಟೋರಿಕ್ಷಾ ಸಂಘ, ಗ್ರಾಹಕ ಸಂಘದವರು ಸೇರಿ ಅ.18ರಂದು ಟೋಲ್‌ಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿ ಜನತೆ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಪೊಲೀಸರ ನೋಟೀಸ್ ಬಗ್ಗೆ ಪ್ರತ್ರಿಯಿಸಿದ ಅವರು, ಸುರತ್ಕಲ್ ಟೋಲ್‌ಗೆ ಮುತ್ತಿಗೆ ಹಾಕಲು ಈಗಾಗಲೇ ಎಲ್ಲ ರೀತಿಯ ಸಿದ್ದತೆ ನಡೆಸಿದ್ದೇವೆ. ಪೋಲಿಸ್ ಇಲಾಖೆ ಯಾವುದನ್ನು ಹತ್ತಿಕ್ಕುತ್ತದೆ ಎಂದು ಗಮನಿಸುತ್ತಿದ್ದೇವೆ. ಜಿಲ್ಲಾಡಳಿತ, ಪೋಲಿಸರು ಗುತ್ತಿಗೆದಾರರ ಹಿತಾಸಕ್ತಿ ಕಾಯುತ್ತಾರೆಯೋ, ಸಾರ್ವಜನಿಕರ ಹಿತರಕ್ಷಣೆ ಮಾಡುತ್ತಾರೆಯೋ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ಮುಖಂಡರಾದ ಜಿತೇಂದ್ರ ಫುರ್ಟಾಡೋ, ಚರಣ್ ವಿಠಲ್ ಉಪಸ್ಥಿತರಿದ್ದರು.
‘ಆರೆಸ್ಸೆಸ್ ಬಿಜೆಪಿಯಂತೆ ಪಿಎಫ್‌ಐ ಎಸ್ಡಿಪಿಐ’
ಪಿಎಫ್‌ಐ ಮತ್ತು ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು. ಚುನಾವಣೆಯಲ್ಲಿ ಎಸ್‌ಡಿಪಿಐ ಪರವಾಗಿ ಪಿಎಫ್‌ಐ ಕೆಲಸ ಮಾಡಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಇರುವಾಗೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಇದೆ. ಬಿಜೆಪಿ ಸರಕಾರ ಎಸ್‌ಡಿಪಿಐಯನ್ನು ನಿಷೇಧಿಸದೆ ಇರುವುದು ಚುನಾವಣೆಯ ಕಾರ್ಯ ತಂತ್ರ ಭಾಗವೇ ಆಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಪ್ರಮೋದ್ ಮಧ್ವರಾಜ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಂತ್ರಿ ಪದವಿ ತೆಗೆದು ಪ್ರಮೋದ್ ಮಧ್ವರಾಜ್ ಅವರನ್ನು ಮಂತ್ರಿ ಮಾಡಿದ್ದಾರೆ. ಪ್ರಮೋದ್ ಕಾಂಗ್ರೆಸ್ ಪಕ್ಷದಲ್ಲಿರುವಾಗ ನಮಗೆ ಸಮಸ್ಯೆ ಆಗಿದೆಯೇ ಹೊರತು ನಮ್ಮಿಂದ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿಸಿದರು.







