ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಸ್ಪರ್ಧಾತ್ಮಕ ಚಿಂತನೆ ಅಗತ್ಯ: ಬಿಷಪ್

ಶಿರ್ವ, ಅ.16: ಕಠಿಣ ಪರಿಶ್ರಮ ಮತ್ತು ಗುರಿ ಇದ್ದಾಗ ಮಾತ್ರ ವಿದ್ಯಾರ್ಥಿ ಗಳು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕಥೊಲಿಕ್ ಸಭಾ ಮತ್ತು ಜಾನ್ ಡಿಸಿಲ್ವಾ ಫೌಂಡೇಶನ್ ವತಿಯಿಂದ ರವಿವಾರ ಪಾಂಬೂರಿನ ಮಾನಸ ಪುನರ್ವಸತಿ ಕೇಂದ್ರದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಹಲವಾರು ಅವಕಾಶ ಗಳಿವೆ. ಆದರೆ ಅದನ್ನು ಪಡೆದುಕೊಳ್ಳುವತ್ತ ಕಠಿಣ ಪರಿಶ್ರಮ ಮತ್ತು ಸ್ಪರ್ಧಾತ್ಮಕ ಚಿಂತನೆ ಅಗತ್ಯವಿದೆ. ವಿದ್ಯಾರ್ಥಿಗಳು ಕೇವಲ ಬಾವಿಯೊಳಗಿನ ಕಪ್ಪೆಯಾಗದೆ ಮುಂದೆ ಯಾವ ಗುರಿ ತಲುಪಬೇಕು ಎನ್ನುವುದನ್ನು ಬಾಲ್ಯದಲ್ಲಿಯೇ ನಿರ್ಧಾರ ಮಾಡಬೇಕು. ಆಗ ಮಾತ್ರ ಯಶಸ್ಸು ಲಭಿಸಲು ಸಾಧ್ಯವಿದೆ ಎಂದರು.
ಮುಂದಿನ 20 ವರ್ಷಗಳಿಗೆ ಬೇಕಾದ ಉದ್ಯೋಗಗಳು ಭಾರತದಲ್ಲೇ ಇದ್ದು ಅದಕ್ಕೆ ಬೇಕಾದ ರೀತಿಯ ಶಿಕ್ಷಣವನ್ನು ಪಡೆಯುವತ್ತ ನಮ್ಮ ಮಕ್ಕಳು ಪ್ರಯತ್ನಿಸ ಬೇಕು. ಮಕ್ಕಳು ತಮ್ಮನ್ನು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿ ಕೊಂಡಾಗ ಉತ್ತಮವಾದ ಫಲಿತಾಂಶದೊಂದಿಗೆ ಒಳ್ಳೆಯ ಉದ್ಯೋಗ ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೊಸ ಶಿಕ್ಷಣ ನೀತಿ ಯಂತೆ ಚಿಕ್ಕಂದಿನಲ್ಲೇ ಇದಕ್ಕೆ ಸಜ್ಜುಗೊಳ್ಳಬೇಕು ಎಂದರು.
ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ನಮ್ಮ ಸಮುದಾಯದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ದೊಂದಿಗೆ ಸರಕಾರಿ ಸೇವೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಶಕ್ತರ ನ್ನಾಗಿಸಲು ಪೋಷಕರು ಪ್ರಯತ್ನಿಸುವುದರೊಂದಿಗೆ ಹೆಚ್ಚು ಸರಕಾರಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುವತ್ತ ಉತೆತೀಜನ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಫೌಂಡೇಶನ್‌ನ ಮುಖ್ಯಸ್ಥರಾದ ಜೋನ್ ಡಿಸಿಲ್ವಾ, ಗ್ಲ್ಯಾಡಿಸ್ ಡಿಸಿಲ್ವ, ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ರೋಬರ್ಟ್ ಮಿನೇಜಸ್, ಕಥೊಲಿಕ್ ಸಭಾ ಅಧ್ಯಕ್ಷ ಮೇರಿ ಡಿಸೋಜ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿಸೋಜ, ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮಿನೇಜಸ್, ಕಾರ್ಯದರ್ಶಿ ಕಾರ್ಯಕ್ರಮದ ಸಂಯೋಜಕ ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.







