ಎಂಆರ್‌ಪಿಎಲ್‌ನ ಮಾಲಿನ್ಯ ಆರೋಪ: ನದಿಯಲ್ಲಿ ಮೀನುಗಳ ಸಾವು

ಸುರತ್ಕಲ್, ಅ.16: ಎಂಆರ್‌ಪಿಎಲ್ ನ ಮಾಲಿನ್ಯದಿಂದ ನದಿಯ ಟನ್ ಗಟ್ಟಲೆ ಮೀನುಗಳು ಜೋಕಟ್ಟೆ ಸಮೀಪದ ತೋಕೂರು ಹಳ್ಳದ ಬಳಿ ಸತ್ತು ಬಿದ್ದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೀನುಗಳಿ ಸತ್ತು ಬಿದ್ದಿರುವ ಕುರಿತು ಜೋಕಟ್ಟೆ ಹೋರಾಟ ಸಮಿತಿ ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಿದ್ದು, ಈ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೋರಾಟ ಸಮಿತಿ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜೋಕಟ್ಟೆ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಎಂಆರ್ ಪಿಎಲ್ ಸುತ್ತಲ ಪರಿಸರದ ಮೇಲೆ ಮಾಡುತ್ತಿರುವ ಮಾರಕ ಮಾಲಿನ್ಯದ ಕುರಿತು ನಾವು ವರ್ಷಗಳಿಂದ ಸತತ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ ಜಿಲ್ಲಾಡಳಿತ, ಸರಕಾರದಿಂದ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇದರ ಪರಿಣಾಮವಾಗಿ ಟನ್ ಗಟ್ಟಲೆ ಮೀನುಗಳು ಇಂದು ಹಳ್ಳದಲ್ಲಿ ಸತ್ತು ಬಿದ್ದಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಇದೇ ಸಮಸ್ಯೆ ಮುಂದಿಟ್ಟು ಮಾಲಿನ್ಯ ನಿಯಂತ್ರಣ ಮಂಡಳಿ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿದೆವು. ಎಂಆರ್‌ಪಿಎಲ್ ಸೇರಿದಂತೆ ತಪ್ಪೆಸಗುತ್ತಿರು ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದೆವು. ಸರಕಾರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೀರ್ತಿ ಕುಮಾರ್ ರನ್ನು ವರ್ಗಾವಣೆ ಮಾಡಿ ಕೈ ತೊಳೆದು ಕೊಂಡಿತು. ಈಗ ಮತ್ತೆ ಅನಾಹುತ ಬಹಿರಂಗಗೊಂಡಿವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಡಳಿತ ಯಥಾ ಪ್ರಕಾರ ಸ್ಯಾಂಪಲ್ ಸಂಗ್ರಹ, ಎಂಆರ್‌ಪಿಎಲ್‌ಗೆ ಒಂದು ನೋಟೀಸು ಕೊಟ್ಟು ಸುಮ್ಮನಾಗುತ್ತದೆ. ಇದು ಸರಿಯಲ್ಲ. ದೃಢವಾದ ಕ್ರಮಗಳು ಆಗದಿದ್ದಲ್ಲಿ ಮುಂದಕ್ಕೆ ಸರಿಪಡಿಸಲಾಗದಷ್ಟು ಅನಾಹುತವಾಗುವುದು ಖಂಡಿತ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕೆಂದು ಸರಕಾರ, ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.









