ಕೆರೆ ನಿರ್ಮಾತೃ ಕಾಮೇಗೌಡ ನಿಧನಕ್ಕೆ ನಳಿನ್ ಕುಮಾರ್ ಸಂತಾಪ

ಕಾಮೇಗೌಡ
ಬೆಂಗಳೂರು: ಆಧುನಿಕ ಭಗೀರಥ ಹಾಗೂ ಕೆರೆಗಳ ಮನುಷ್ಯರೆಂದೇ ಖ್ಯಾತರಾಗಿರುವ ಕಾಮೇಗೌಡ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕುರಿಗಾಹಿಯಾಗಿದ್ದ ಅವರು ಕುರಿ ಮಾರಿ ಸಂಪಾದಿಸಿದ ಹಣದಲ್ಲಿ ಬೆಟ್ಟದ ಮೇಲೆ ಕಟ್ಟೆಗಳನ್ನು ತೋಡಿಸಿದ್ದರು. ಪ್ರತಿ ಕಟ್ಟೆಗೂ ದೇವರು ಹಾಗೂ ಮೊಮ್ಮಕ್ಕಳ ಹೆಸರು ಇಟ್ಟಿದ್ದರು. ಹಲವು ವರ್ಷಗಳಿಂದಲೂ ಕಟ್ಟೆಗಳನ್ನು ಸಂರಕ್ಷಿಸಿ ಬೆಟ್ಟದ ತಟದಲ್ಲಿ ಹಸಿರು ಪರಿಸರ ಇರುವಂತೆ ನೋಡಿಕೊಂಡಿದ್ದರು. ಬೆಟ್ಟದ ಮೇಲ್ಭಾಗ ಹಾಗೂ ತಟದಲ್ಲಿ ನೂರಾರು ಸಸಿ ನೆಟ್ಟು ಬೆಳೆಸಿದ್ದರು. ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, ‘ಮನ್ ಕಿ ಬಾತ್’ ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು ಎಂದು ನಳಿನ್ ಗಮನ ಸೆಳೆದಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಹಲವು ನಾಯಕರು ಅವರ ಸೇವೆಯನ್ನು ಹೊಗಳಿದ್ದರು. ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಅವರ ಸೇವೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು. ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು ಎಂದು ತಿಳಿಸಿದ್ದಾರೆ.
ಅವರ ಕುಟುಂಬದವರು, ಬಂಧುಮಿತ್ರರು ಮತ್ತು ಅಭಿಮಾನಿಗಳಿಗೆ ಹಿರಿಯರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಪರಮಾತ್ಮನು ನೀಡಲಿ ಎಂದು ನಳಿನ್ ಕುಮಾರ್ ಪ್ರಾರ್ಥಿಸಿದ್ದಾರೆ.







