ಮುಂಬೈ ಅಂಧೇರಿ (ಪೂರ್ವ) ಉಪಚುನಾವಣೆಯಿಂದ ತನ್ನ ಅಭ್ಯರ್ಥಿ ಹಿಂಪಡೆದ ಬಿಜೆಪಿ

Photo:PTI
ಹೊಸದಿಲ್ಲಿ: ಮಹಾರಾಷ್ಟ್ರದ ಹಲವಾರು ಪ್ರಮುಖ ನಾಯಕರ ಮನವಿಯ ನಂತರ ಬಿಜೆಪಿ ಸೋಮವಾರ ಉದ್ಧವ್ ಠಾಕ್ರೆ ಅವರ ಸೇನಾ ಬಣದ ಅಭ್ಯರ್ಥಿಯನ್ನು ಬೆಂಬಲಿಸಿ ಮುಂಬೈ ಅಂಧೇರಿ (ಪೂರ್ವ) ಉಪಚುನಾವಣೆಯಿಂದ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದೆ ಎಂದು NDTV ವರದಿ ಮಾಡಿದೆ.
ರುತುಜಾ ಲಟ್ಕೆ ಅವರು ತಮ್ಮ ಪತಿಯ ಅಂಧೇರಿ (ಪೂರ್ವ) ಕ್ಷೇತ್ರದಿಂದ ಬಿಜೆಪಿಯ ಮುರ್ಜಿ ಪಟೇಲ್ ವಿರುದ್ಧ ಸ್ಪರ್ಧಿಸಿದ್ದರು. ಈಗ ಅವರ ಆಯ್ಕೆಯ ಹಾದಿ ಸುಗಮವಾಗಿದೆ.
ಈ ವರ್ಷದ ಆರಂಭದಲ್ಲಿ ಶಿವಸೇನಾ ಶಾಸಕ ರಮೇಶ್ ಲಟ್ಕೆ ನಿಧನರಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬೈ ನಗರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ನ.3ರಂದು ಈ ಕ್ಷೇತ್ರಕ್ಕೆ ಉಪ ಚುನಾವಣೆ ನಿಗದಿಯಾಗಿದೆ. ಎನ್ ಸಿಪಿ ವರಿಷ್ಠ ಶರದ್ ಪವಾರ್ , ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿರುವ ಶಾಸಕ ಅಂಧೇರಿ ಪೂರ್ವ ಕ್ಷೇತ್ರಕ್ಕೆ ಸ್ಪರ್ಧಿಸದಂತೆ ಬಿಜೆಪಿಯನ್ನು ಒತ್ತಾಯಿಸಿದ್ದರು.
ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಬಿಜೆಪಿ ನಾಯಕ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ತಮ್ಮ ಪಕ್ಷದ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವಂತೆ ರುತುಜಾ ಲಟ್ಕೆ ಅವರನ್ನು ಉಪಚುನಾವಣೆಯಲ್ಲಿ ಅವಿರೋಧವಾಗಿ ಗೆಲ್ಲಿಸುವಂತೆ ಒತ್ತಾಯಿಸಿದ್ದಾರೆ.
ಉದ್ಧವ್ ಠಾಕ್ರೆ ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಪಾಳೆಯದ ಶಾಸಕ ಪ್ರತಾಪ್ ಸರ್ನಾಯಕ್ ಕೂಡ ಮುಖ್ಯಮಂತ್ರಿಗೆ ಪತ್ರ ಬರೆದು ಬಿಜೆಪಿ ಪಕ್ಷವು ಋತುಜಾ ಲಟ್ಕೆ ಅವರ ದಿವಂಗತ ಪತಿಗೆ ಗೌರವವಾಗಿ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದು ಎಂದು ಆಗ್ರಹಿಸಿದ್ದಾರೆ.
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು "ಹೊಸ ಸದಸ್ಯ (ಎಂಎಲ್ಎ) ಅವಧಿ ಕೇವಲ ಒಂದೂವರೆ ವರ್ಷಗಳು. ರಮೇಶ ಲಟ್ಕೆ ಅವರ ದುರದೃಷ್ಟಕರ ಸಾವಿನ ಕಾರಣದಿಂದ ಉಪಚುನಾವಣೆ ನಡೆಯುತ್ತಿದೆ. ಅವರ ಕೊಡುಗೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಹೇಳಿದರು.







